ನ್ಯೂಸ್

ನವೀನ್​ ಹುಟ್ಟೂರಲ್ಲಿ ಮಡುಗಟ್ಟಿದ ಶೋಕ.. ಮಗನನ್ನು ನೋಡಿ ಬಿಕ್ಕಿಬಿಕ್ಕಿ ಅತ್ತ ತಾಯಿ...

ಹಾವೇರಿ: ಯುದ್ಧಪೀಡಿತ ಯೂಕ್ರೇನ್​ನಲ್ಲಿ ರಷ್ಯಾ ಸೇನಾ ಪಡೆಯ ಶೆಲ್​ ದಾಳಿಯಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ಚಳಗೇರಿ ಗ್ರಾಮದ ಎಂಬಿಬಿಎಸ್​ ವಿದ್ಯಾರ್ಥಿ ನವೀನ ಗ್ಯಾನಗೌಡರ ಅವರ ಮೃತದೇಹ ಹುಟ್ಟೂರಿಗೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ. ನವೀನ್​ರ ಅಂತಿಮ ದರ್ಶನ ಪಡೆಯುವ ಭಾರವಾದ ಮನಸ್ಸಿನಲ್ಲೇ ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿದ್ದು, ಹೆತ್ತವರ ಗೋಳಾಟ ನೋಡಿ ಕಂಬನಿ ಮಿಡಿಯುತ್ತಿದ್ದಾರೆ.

ಮಾ.2ರಂದು ಯೂಕ್ರೇನ್​ನಲ್ಲಿ ನವೀನ್​ ಮೃತಪಟ್ಟಿದ್ದರು. ಈ ಸುದ್ದಿ ತಿಳಿದಾಗಿನಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. 20 ದಿನಗಳ ಬಳಿಕ ಅಂದರೆ ಇಂದು(ಮಾ.21) ನವೀನ್​ ಮೃತದೇಹ ಕರ್ನಾಟಕಕ್ಕೆ ಬಂತು. ನಸುಕಿನ 3 ಗಂಟೆಯ ಹೊತ್ತಿಗೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪಾರ್ಥಿವ ಶರೀರವನ್ನು ಬರಮಾಡಿಕೊಂಡರು. ಸದ್ಯ ಸಿಎಂ ಹಾವೇರಿಗೆ ಪ್ರಯಾಣ ಬೆಳೆಸಿದ್ದು, ನವೀನ್​ ಸ್ವಗೃಹಕ್ಕೆ ಭೇಟಿ ನೀಡಿ ಬೆಂಗಳೂರಿಗೆ ವಾಪಸ್​ ಆಗಲಿದ್ದಾರೆ.

ಸ್ವಗೃಹ ಚಳಗೇರಿಯ ಮನೆ ಬಳಿ ನವೀನ್​ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಜನರಿಗೆ ವ್ಯವಸ್ಥೆ ಮಾಡಲಾಗಿದೆ. ಶಾಸಕ ಅರುಣ್​ ಕುಮಾರ್​ ಪೂಜಾರ್​ ಕೂಡ ನವೀನ್​ರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.