ನ್ಯೂಸ್

ಜೈಲುವಾಸಿಗಳ ಪರ ವಕಾಲತಿಗೆ ವಕೀಲರ ನೇಮಕ! ಕರ್ನಾಟಕದಲ್ಲಿ ಬೆಳಗಾವಿ ಆಯ್ಕೆ, ಅಪರಾಧಿಗಳು ಹಣ ಇಲ್ಲವೆಂದು ಕೊರಗಬೇಕಿಲ್ಲ

| ಜಗದೀಶ ಹೊಂಬಳಿ ಬೆಳಗಾವಿ

ವಿವಿಧ ಅಪರಾಧ ಕೃತ್ಯಗಳಲ್ಲಿ ಕಾರಾಗೃಹವಾಸ ಅನುಭವಿಸುತ್ತಿರುವ ಜೈಲುವಾಸಿಗಳು ಹಾಗೂ ತೀವ್ರ ಸ್ವರೂಪದ ಸತ್ರ (ಸೆಷನ್ಸ್​) ಪ್ರಕರಣದಲ್ಲಿ ಭಾಗಿಯಾಗಿರುವ ಅಪರಾಧಿಗಳು ತಮ್ಮ ಪರ ವಕಾಲತಿಗಾಗಿ ವಕೀಲರಿಗೆ ಗೌರವಧನ ನೀಡಲು ಹಣವಿಲ್ಲ ಎಂದು ಕೊರಗಬೇಕಿಲ್ಲ. ಸ್ವತಃ ಸರ್ಕಾರವೇ ಜೈಲುವಾಸಿಗಳಿಗೆ, ಅಪರಾಧಿಗಳಿಗೆ ಉಚಿತವಾಗಿ ವಕೀಲರನ್ನು ನೇಮಿಸಿದೆ.

ಇಂತಹದ್ದೊಂದು ವಿಶಿಷ್ಟ ಪರಿಕಲ್ಪನೆಯ "ಡಿಫೆನ್ಸ್​ ಲೀಗಲ್​ ಏಯ್ಡ್​ ಸಿಸ್ಟಮ್​'' ಅನ್ನು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಪರಿಚಯಿಸಿದೆ. ದೇಶದಲ್ಲಿ 32 ಜಿಲ್ಲಾ ಪ್ರಾಧಿಕಾರದ ಕಚೇರಿಯಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಈ ವ್ಯವಸ್ಥೆ ಅನುಷ್ಠಾನಕ್ಕೆ ಬಂದಿರುವುದು ವಿಶೇಷ.

17 ಪ್ರಕರಣ ಇತ್ಯರ್ಥ: ದೇಶದ 32 ರಾಜ್ಯಗಳಲ್ಲಿ ತಲಾ ಒಂದು ಜಿಲ್ಲೆಯಲ್ಲಿ ಕೇಂದ್ರದ ಕಾನೂನು ಸೇವಾ ಪ್ರಾಧಿಕಾರದಿಂದ "ಡಿಫೆನ್ಸ್​ ಲೀಗಲ್​ ಏಯ್ಡ್​ ಸಿಸ್ಟಮ್​'' ಸ್ಥಾಪಿಸಲಾಗಿದ್ದು, 2021ರ ಜನವರಿಯಿಂದ ಕಾರ್ಯಾರಂಭ ಮಾಡಿದೆ. ಕಾನೂನಿನಲ್ಲಿ ಆಳವಾದ ಜ್ಞಾನ ಹೊಂದಿರುವ 3 ವಕೀಲರನ್ನು ಈ ವ್ಯವಸ್ಥೆಯಡಿ ನೇಮಕ ಮಾಡಲಾಗಿದೆ. ಇವರು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ 11 ತಿಂಗಳ ಅವಧಿಯಲ್ಲಿ ಕೈಗೆತ್ತಿಕೊಂಡ 75 ಪ್ರಕರಣಗಳಲ್ಲಿ 17 ಪ್ರಕರಣ ಇತ್ಯರ್ಥಕ್ಕೆ ಶ್ರಮಿಸಿದ್ದಾರೆ. ಉಳಿದ 58 ಪ್ರಕರಣಗಳಲ್ಲಿ ಕಕ್ಷಿದಾರರಿಗೆ ನ್ಯಾಯ ಕೊಡಿಸಲು ಈ ವಕೀಲರು ಪ್ರಯತ್ನಿಸುತ್ತಿದ್ದಾರೆ.

ಡಿಎಲ್​ಎಎಸ್​ ವಿಶೇಷವೇನು?: ವಿವಿಧ ಪ್ರಕರಣದಲ್ಲಿ ಜೈಲು ಸೇರಿರುವ ಹಾಗೂ ಜಾಮೀನಿನ ಮೇಲೆ ಹೊರಗೆ ಇರುವ ಅಪರಾಧಿಗಳು, ಅನಕ್ಷರಸ್ಥರು, ದೌರ್ಜನ್ಯಕ್ಕೊಳಗಾದವರು, ಬಡವರು ಆರ್ಥಿಕ ಸಂಕಷ್ಟದಿಂದಾಗಿ ತಮ್ಮ ಪರವಾಗಿ ವಾದಿಸುವುದಕ್ಕೆ ಅನುಭವಿ ವಕೀಲರಿಲ್ಲ ಎಂದು ಕೊರಗುತ್ತಾರೆ. ಇದನ್ನು ನೀಗಿಸಲೆಂದೇ ಕಾನೂನು ಸೇವಾ ಪ್ರಾಧಿಕಾರವು "ಡಿಫೆನ್ಸ್​ ಲೀಗಲ್​ ಏಯ್ಡ್​ ಸಿಸ್ಟಮ್​'' ಜಾರಿಗೆ ತಂದಿದೆ. ಪ್ರಾಯೋಗಿಕವಾಗಿ ಪ್ರತಿ ರಾಜ್ಯದಲ್ಲಿ ಒಂದೊಂದು ಜಿಲ್ಲೆ ಆಯ್ಕೆ ಮಾಡಲಾಗಿದೆ. ಬೆಳಗಾವಿಯಲ್ಲಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ರಾಜ್ಯದ ವಿವಿಧೆಡೆಯ ಕೈದಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯದಲ್ಲಿ ಗಲ್ಲು ಶಿಕ್ಷೆ ವಿಧಿಸಲು ಇರುವ ವ್ಯವಸ್ಥೆ ಹೊಂದಿದ ಏಕೈಕ ಕಾರಾಗೃಹ ಇದಾಗಿದೆ. ಈ ಎಲ್ಲ ಮಾನದಂಡಗಳ ಆಧಾರದಲ್ಲಿ ಬೆಳಗಾವಿ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ.

ವಕೀಲರು ಎಂಥ ಪ್ರಕರಣದಲ್ಲಿ ವಾದಿಸುತ್ತಾರೆ?: ಕೆಲ ಪ್ರಕರಣದಲ್ಲಿ ಜೈಲುವಾಸಿಗಳು ಅಪರಾಧ ಮಾಡದಿದ್ದರೂ ತಮ್ಮ ಮೇಲೆ ಬಂದಿರುವ ಆಪಾದನೆಯಿಂದ ಮುಕ್ತರಾಗಲು ಆಗದೇ ಕಾರಾಗೃಹ ನಿವಾಸಿಗಳಾಗಿರುತ್ತಾರೆ. ಇನ್ನೂ ಕೆಲ ಪ್ರಕರಣಗಳಲ್ಲಿ ಜೈಲು ವಾಸಿಗಳಿಗೆ ತಮಗೆ ಶಿಕ್ಷೆ ಆಗಿರುವ ಬಗ್ಗೆ ಅಸಮಾಧಾನ ಇರುತ್ತದೆ. ಈ ವ್ಯವಸ್ಥೆ ಮೂಲಕ ಎರಡು ತೆರೆನಾದ ಕೈದಿಗಳನ್ನು ಕಾರಾಗೃಹ ವಾಸದಿಂದ ಮುಕ್ತಗೊಳಿಸುವ ಉದ್ದೇಶ ಹೊಂದಲಾಗಿದೆ. ಅಲ್ಲದೆ, ಅಂತಹವರು ಮೇಲ್ಮನವಿಯನ್ನೂ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಹೀಗಾಗಿ, ವಕೀಲರು ಈ ರೀತಿಯ ಪ್ರಕರಣಗಳಲ್ಲಿ ಆದ್ಯತೆ ನೀಡುತ್ತಾರೆ.

ವಕೀಲರ ಪ್ರಯತ್ನದ ಫಲವಾಗಿ ಈಗಾಗಲೇ ಹಲವರು ಕಾರಾಗೃಹ ವಾಸದಿಂದ ಮುಕ್ತರಾಗಿ ತಮ್ಮ ಮನೆಗಳಲ್ಲಿ ನೆಮ್ಮದಿಯ ದಿನ ಕಳೆಯುತ್ತಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಇಂತಹ ಪ್ರಕರಣಗಳನ್ನು ಗುರುತಿಸಿ, ವಕೀಲರಿಗೆ ಹಸ್ತಾಂತರಿಸುವ ಕಾರ್ಯದಲ್ಲಿ ತೊಡಗಿದೆ. ಹಿಂಡಲಗಾ ಕಾರಾಗೃಹದಲ್ಲಿ ಬೆಳಗಾವಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕ್ಲಿನಿಕ್​ ಹೊಂದಿದ್ದು, ಅದರ ಮೂಲಕ ಜೈಲುವಾಸಿಗಳು ವಕೀಲರನ್ನು ಸಂಪರ್ಕಿಸಿ ಮೇಲ್ಮನವಿಗೆ ಹಾಗೂ ತಮಗೆ ಡಿಫೆನ್ಸ್​ ಲೀಗಲ್​ ಏಯ್ಡ್​ ವಕೀಲರನ್ನು ನೇಮಿಸಿಕೊಡುವಂತೆ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ವ್ಯವಸ್ಥೆ ಬಗ್ಗೆ ಬೆಳಗಾವಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಅರಿವು ಮೂಡಿಸುತ್ತಿದ್ದು, ವ್ಯವಸ್ಥಿತವಾಗಿ ಪ್ರಚಾರ ಮಾಡುತ್ತಿದೆ.

ಮೂವರು ವಕೀಲರು ಯಾರು? ವ್ಯವಸ್ಥೆಯಡಿ ನುರಿತ ವಕೀಲರ ನೇಮಕಕ್ಕೆ ಬೆಳಗಾವಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಅರ್ಜಿ ಆಹ್ವಾನಿಸಲಾಗಿತ್ತು. 150ಕ್ಕೂ ಅಧಿಕ ಅರ್ಜಿಗಳು ಬಂದಿದ್ದವು. ಪ್ರಾಧಿಕಾರವು ಸಂದರ್ಶನ ನಡೆಸಿ ವಕೀಲರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಕಳುಹಿಸಿತ್ತು. ಅಂತಿಮವಾಗಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ 3 ವಕೀಲರನ್ನು 2 ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿದೆ. ಚೀಫ್​ ಲೀಗಲ್​ ಡಿಫೆನ್ಸ್​ ಕೌನ್ಸಿಲ್​ ವಕೀಲ (50ರಿಂದ 75 ಸಾವಿರ ರೂ. ಸಂಬಳ), ಡೆಪ್ಯುಟಿ ಲೀಗಲ್​ ಡಿಫೆನ್ಸ್​ ಕೌನ್ಸಿಲ್​ ವಕೀಲ (30ರಿಂದ 60 ಸಾವಿರ) ಹಾಗೂ ಅಸಿಸ್ಟಂಟ್​ ಲೀಗಲ್​ ಡಿಫೆನ್ಸ್​ ಕೌನ್ಸಿಲ್​ ವಕೀಲ (20ರಿಂದ 40 ಸಾವಿರ ರೂ. ಸಂಬಳ) ನೇಮಕ ಮಾಡಲಾಗಿದೆ. ಈ ವಕೀಲರಿಗಾಗಿ ಪ್ರತ್ಯೇಕ ಕಚೇರಿ ವ್ಯವಸ್ಥೆ ಇದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಈ ವಕೀಲರು ವಕಾಲತು ವಹಿಸುತ್ತಾರೆ. ವಕಾಲತು ವಹಿಸಿದ ಪ್ರಕರಣಗಳ ಕುರಿತಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪ್ರತಿ ತಿಂಗಳು ಕಡ್ಡಾಯವಾಗಿ ವರದಿ ಒಪ್ಪಿಸುವ ನಿಯಮ ಇದೆ. ಈ ವಕೀಲರು ಕೇವಲ ಲೀಗಲ್​ ಏಯ್ಡ್​ ಪ್ರಕರಣಗಳನ್ನು ಮಾತ್ರ ಕೈಗೆತ್ತಿಕೊಳ್ಳುತ್ತಾರೆ.

ಅಪರಾಧಿಕ ಪ್ರಕರಣದಲ್ಲಿ ಜೈಲುವಾಸಿಯಾದವರ ಪರ ಹಾಗೂ ಸೆಷನ್ಸ್​ ಪ್ರಕರಣಗಳ ಆರೋಪಿಗಳ ಪರವಾಗಿ ವಕಾಲತು ವಹಿಸಲು ಕಾನೂನು ಸೇವಾ ಪ್ರಾಧಿಕಾರವು "ಡಿಫೆನ್ಸ್​ ಲೀಗಲ್​ ಏಯ್ಡ್​ ಸಿಸ್ಟಮ್​''ನಡಿ ವಕೀಲರನ್ನು ನೇಮಿಸಿದೆ. ಜೈಲುವಾಸಿಗಳು ಹಾಗೂ ಇತರ ತೀವ್ರತರ ಅಪರಾಧ ಪ್ರಕರಣದಲ್ಲಿ ಸಿಲುಕಿಕೊಂಡವರು ಈ ವಕೀಲರ ಸಹಾಯದಿಂದ ಮೇಲ್ಮನವಿ ಸಲ್ಲಿಸಬಹುದು. ಸದ್ಯ ಪ್ರಾಯೋಗಿಕವಾಗಿ ರಾಜ್ಯಕ್ಕೆ ಒಂದು ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ. ಇದರ ಸಾಧಕ-ಬಾಧಕ ಅಂಶಗಳನ್ನು ಅವಲೋಕಿಸಿ ಮುಂಬರುವ ದಿನಗಳಲ್ಲಿ ಈ ವ್ಯವಸ್ಥೆಯನ್ನು ಇಡೀ ದೇಶಕ್ಕೆ ವಿಸ್ತರಣೆ ಮಾಡುವ ಸಾಧ್ಯತೆ ಇದೆ.

|ವಿಜಯ ದೇವರಾಜ ಅರಸ್​ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಬೆಳಗಾವಿ