ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಗೆ ತನ್ನದೇ ಆದ ವಿಶಿಷ್ಟ ಘನತೆ ಇದೆ. ಸಮಾಜದ ವಿವಿಧ ರಂಗಗಳ ಸಾಧಕರು, ಗಣ್ಯರು ವೈಚಾರಿಕ ಮಾರ್ಗದರ್ಶನ ನೀಡುವ ಮೂಲಕ, ಸಂಸದೀಯ ಮೌಲ್ಯಗಳನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂಬ ಆಶಯದಿಂದಲೇ ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಪರಂಪರೆ ಇದೆ. ಈ ಹಿಂದೆಯೂ ಗಂಭೀರ ಹಾಗೂ ಮೌಲ್ಯಯುತ ಚರ್ಚೆಗಳ ಮೂಲಕ ಮೇಲ್ಮನೆಯ ಸದಸ್ಯರು ಗಮನ ಸೆಳೆದ ನಿದರ್ಶನಗಳಿವೆ.
ಕರ್ನಾಟಕದಿಂದ ನಾಮನಿರ್ದೇಶನಗೊಂಡಿರುವ ಇನ್ಪೋಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ ಸುಧಾ ಮೂರ್ತಿಯವರು ಮಂಗಳವಾರ ರಾಜ್ಯಸಭೆಯಲ್ಲಿ ಮಾಡಿದ ಚೊಚ್ಚಲ ಭಾಷಣದಲ್ಲೇ, ಪ್ರಮುಖ ಹಾಗೂ ಜನಪರ ವಿಷಯಗಳನ್ನು ಮಂಡಿಸುವ ಮೂಲಕ ಮಾದರಿಯಾಗಿ ಹೊಮ್ಮಿದ್ದಾರೆ ಮತ್ತು ಇತರ ಜನಪ್ರತಿನಿಧಿಗಳು ಕೂಡ ಯಾವ ವಿಷಯಗಳನ್ನು ಪ್ರಸ್ತಾಪಿಸಬೇಕು, ಸದನದ ಘನತೆಯನ್ನು ಹೇಗೆ ಹೆಚ್ಚಿಸಬೇಕು ಎಂಬುದಕ್ಕೆ ನಿದರ್ಶನವಾಗಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಬುಧವಾರ ಉತ್ತರ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಸುಧಾ ಮೂರ್ತಿಯವರ ಭಾಷಣವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಮಹಿಳೆಯರ ಆರೋಗ್ಯ ರಕ್ಷಣೆ ವಿಷಯವನ್ನು ಪ್ರಸ್ತಾಪಿಸಿದ ಸುಧಾ ಮೂರ್ತಿಯವರು, ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡಲು ಸರ್ಕಾರಿ ಪ್ರಾಯೋಜಿತ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳುವ ಅಗತ್ಯವಿದೆ ಎಂದಿದ್ದಾರೆ. ‘9ರಿಂದ 14 ವರ್ಷದೊಳಗಿನ ಬಾಲಕಿಯರಿಗೆ ಗರ್ಭಕಂಠದ ವಿರುದ್ಧ ಲಸಿಕೆ ನೀಡಲಾಗುತ್ತಿದೆ. ಪ್ರಸ್ತುತ ಒಂದು ಲಸಿಕೆ 1400 ರೂ. ದರ ಇದೆ. ಈ ಲಸಿಕೆ ತುಂಬ ಪರಿಣಾಮಕಾರಿಯಾಗಿದ್ದು, ಇದನ್ನು ಪಡೆದು ಹೆಣ್ಣುಮಕ್ಕಳು ಕ್ಯಾನ್ಸರ್ ಅಪಾಯದಿಂದ ಪಾರಾಗಬಹುದು. ಸರ್ಕಾರ ಮಧ್ಯಪ್ರವೇಶಿಸಿದರೆ ಲಸಿಕೆ 700ರಿಂದ 800 ರೂ.ಗೆ ಲಭ್ಯವಾಗಬಹುದು. ಇದರಿಂದ ಭವಿಷ್ಯದಲ್ಲಿ ನಮ್ಮ ಹೆಣ್ಣುಮಕ್ಕಳಿಗೆ ಪ್ರಯೋಜನವಾಗಲಿದೆ’ ಎಂದಿದ್ದಾರೆ. ಅಲ್ಲದೆ, ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆಯೂ ಮಹತ್ವದ ಸಲಹೆ ನೀಡಿದ್ದು, ವಿಶ್ವ ಪಾರಂಪಾರಿಕ ತಾಣ ಸೇರಿರುವ ಭಾರತದ 42 ಸ್ಥಳಗಳ ಬಗ್ಗೆ ಜನರಲ್ಲಿ ಇನ್ನಷ್ಟು ಅರಿವು ಮೂಡಿಸಬೇಕು’ ಎಂದಿದ್ದಾರೆ. ಇಂಥ ರಚನಾತ್ಮಕ ಸಲಹೆಗಳ ಮೂಲಕವೇ ಅಭಿವೃದ್ಧಿಯ ಆಶಯಕ್ಕೆ ವೇಗ ಸಿಗಲು ಸಾಧ್ಯ.
ಸುಧಾಮೂರ್ತಿಯವರ ಭಾಷಣವನ್ನು ರಾಜ್ಯಸಭೆಯ ಎಲ್ಲ ಸದಸ್ಯರು ಆಲಿಸಿದ್ದಾರೆ. ಜನದನಿಗೆ ಹೇಗೆ ಸ್ಪಂದಿಸಬೇಕು ಎಂಬುದನ್ನು ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಇನ್ನಾದರೂ ಅವಲೋಕನ ಮಾಡಿಕೊಳ್ಳಬೇಕು. 18ನೇ ಲೋಕಸಭೆಯ ಮೊದಲ ಅಧಿವೇಶನವೇ ಹಲವು ಅಪಸವ್ಯಗಳಿಗೆ ಸಾಕ್ಷಿಯಾಗಿದೆ. ಚರ್ಚೆ ಮಾಡುವುದನ್ನು ಬಿಟ್ಟು ಗದ್ದಲದ ದಾರಿ ಕಂಡುಕೊಂಡಿರುವುದು ಸರ್ವಥಾ ಸರಿಯಲ್ಲ. ಪ್ರತಿಪಕ್ಷಗಳು ಬುಧವಾರ ರಾಜ್ಯಸಭೆಯ ಕಲಾಪವನ್ನು ಬಹಿಷ್ಕರಿಸಿ, ಯಾವ ಸಂದೇಶ ನೀಡಿದವು? ಅಧಿವೇಶನ ನಡೆಯುವುದು, ಸಂಸದರಿಗೆ ಸೌಲಭ್ಯ, ಭತ್ಯೆ ಸಿಗುವುದು ಜನರ ತೆರಿಗೆ ಹಣದಿಂದ ಎಂಬುದು ನೆನಪಿರಲಿ. ಕೆಲವೇ ದಿನಗಳಲ್ಲಿ ಬಜೆಟ್ ಅಧಿವೇಶನ ಆರಂಭವಾಗಲಿದೆ. ಪ್ರತಿಪಕ್ಷಗಳು ಇನ್ನಾದರೂ ಜವಾಬ್ದಾರಿಯ ನಡವಳಿಕೆ ತೋರುವ ಜತೆಗೆ ಸಂಸದೀಯ ಮೌಲ್ಯಗಳನ್ನು ಎತ್ತಿಹಿಡಿಯಲಿ.