ನ್ಯೂಸ್

ಪಾದಯಾತ್ರೆಗೆ ಕ್ಷಣಕ್ಕೊಂದು ತಿರುವು: ಬಿಡದಿಯಲ್ಲಿ ಊಟದ ವ್ಯವಸ್ಥೆ ರದ್ದು, 5 ಮಂದಿ ಮಾತ್ರವೇ ಪಾದಯಾತ್ರೆ ಮಾಡ್ತಾರೆ...

ರಾಮನಗರ: ಮೇಕೆದಾಟು ಪಾದಯಾತ್ರೆ ಹೋರಾಟ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಐವರು ನಾಯಕರು ಮಾತ್ರವೇ ಪಾದಯಾತ್ರೆ ಮುಂದುವರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೇಕೆದಾಟು ಪಾದಯಾತ್ರೆಯ 5ನೇ ದಿನವಾದ ಇಂದು ಬಿಡದಿಯಲ್ಲಿ 10 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಈ ಊಟದ ವ್ಯವಸ್ಥೆಯನ್ನು ರದ್ದುಗೊಳಿಸಿದ್ದಾರೆ. ಆದರೆ, ಪಾದಯಾತ್ರೆ ನಡೆಯಲಿ ಬಿಡಲಿ, ಬಂದವರು ಹಸಿವಿನಿಂದ ಹೋಗಬಾರದು ಎಂದು ಮಾಯಗಾನಹಳ್ಳಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಜಿಲ್ಲಾಡಳಿತ ಪಾದಯಾತ್ರೆ ಮೇಲೆ‌ ನಿಷೇಧ ಏರಿದರೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​, ಡಿ.ಕೆ.ಸುರೇಶ್​ ಸೇರದಂತೆ ಐದು ಮಂದಿಯಷ್ಟೇ ಪಾದಯಾತ್ರೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಡಿ.ಕೆ.ಶಿವಕುಮಾರ್​, ಡಿ.ಕೆ.ಸುರೇಶ್​ ಇನ್ನೂ ಕನಕಪುರದ ತಮ್ಮ ನಿವಾಸದಲ್ಲಿದ್ದಾರೆ. ಇನ್ನೊಂದೆಡೆ ರಾಮನಗರದ ಐಜೂರು ವೃತ್ತದಲ್ಲಿ ಪೊಲೀಸರ ಕಾವಲಿನಲ್ಲಿ ಪಾದಯಾತ್ರೆಗೆ ಅಂತಿಮ ಸಿದ್ಧತೆ ನಡೆಯುತ್ತಿದೆ.

ಪಾದಯಾತ್ರೆಗೆ ಪಣ ತೊಟ್ಟಿರುವ ಡಿಕೆಶಿ, ಒಂದುವೇಳೆ ತೊಡಕುಉಂಟಾದರೆ ಕೇವಲ 5 ಮಂದಿ ಅಂತರ ಕಾಪಾಡಿಕೊಂಡು ನಡೆಯೋಣ. ಕೋವಿಡ್ ನಿಯಮ ಪಾಲಿಸಿ ನಡೆಯೋಣ. ಹೀಗೆ ಮಾಡಿದರೆ ಅವರು ನಮ್ಮನ್ನ ತಡೆಯಲು ಸಾಧ್ಯವಿಲ್ಲ ಎಂದು ಡಿಕೆಶಿ ಹೇಳುತ್ತಿದ್ದಾರೆ ಎನ್ನಲಾಗಿದೆ.

ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವ ಐದನೇ ದಿನ ಪಾದಯಾತ್ರೆ ಹೈಕೋರ್ಟ್, ಜಿಲ್ಲಾಡಳಿತ, ಸರ್ಕಾರ ಹಾಗೂ ಕಾಂಗ್ರೆಸ್​ನ ಪ್ರತಿಷ್ಠೆಯ ನಡುವೆ ಏನೆಲ್ಲಾ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.