ನವದೆಹಲಿ: ಈ ಭಾನುವಾರ, ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿರುವ ನನ್ನ ಖಾತೆಗಳನ್ನು ಬಿಡೋದಾ ಅಂತ ಆಲೋಚನೆ ಮಾಡ್ತಿದ್ದೇನೆ. ಎಲ್ಲವನ್ನೂ ತಿಳಿಸುತ್ತಿರುತ್ತೇನೆ. - ಹೀಗೊಂದು ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾತ್ರಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ಮೋದಿಯವರಿಗೆ ಫೇಸ್ಬುಕ್ನಲ್ಲಿ 44 ದಶಲಕ್ಷ ಫಾಲೋವರ್ಸ್ ಇದ್ದು, ಟ್ವಿಟರ್ನಲ್ಲಿ 53.3 ದಶಲಕ್ಷ ಫಾಲೋವರ್ಸ್ ಇದ್ದಾರೆ. ಅವರ ಈ ಟ್ವೀಟ್ಗೆ ಒಂದು ಲಕ್ಷದಷ್ಟು ಜನ ಪ್ರತಿಕ್ರಿಯಿಸಿದ್ದು, 50 ಸಾವಿರದಷ್ಟು ಜನ ರೀಟ್ವೀಟ್ ಮಾಡಿದ್ದಾರೆ. 1.5 ಲಕ್ಷಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಕೆಲವರು ಪ್ರಧಾನಿಯವರ ಟ್ವೀಟನ್ನು ವಿಶ್ಲೇಷಿಸಿ ಕಾರಣ ಮತ್ತು ಪರಿಣಾಮವನ್ನೂ ಮುಂದಿಟ್ಟಿದ್ದಾರೆ.
ಈ ಟ್ವೀಟ್ ಸಂದೇಶಕ್ಕೆ ಭರಪೂರ ಪ್ರತಿಕ್ರಿಯೆ ಲಭ್ಯವಾಗಿದ್ದು, ಅವರ ಈ ನಿರ್ಧಾರ ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬ ಚರ್ಚೆಯೂ ಆರಂಭವಾಗಿದೆ. ಟ್ವಿಟರ್, ಫೇಸ್ಬುಕ್ಗಳಿಂದ ಜನ ಸಾಮೂಹಿಕವಾಗಿ ನಿರ್ಗಮಿಸುವ ಸಾಧ್ಯತೆ ಇದೆಯೇ ಎಂಬ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಪ್ರಧಾನಿಯವರ ಈ ಟ್ವೀಟ್ಗೆ ಜನ ಚಿತ್ರವಿಚಿತ್ರವಾಗಿ ಪ್ರತಿಕ್ರಿಯೆ ನೀಡಲಾರಂಭಿಸಿದ್ದಾರೆ. ಕೆಲವು ಪೂರಕ ಪ್ರತಿಕ್ರಿಯೆ ನೀಡಿದರೆ, ಇನ್ನು ಕೆಲವರು ಸಾಧ್ಯವೇ ಇಲ್ಲ ಎಂದಿದ್ದಾರೆ.