ನ್ಯೂಸ್

ದೇಶದಲ್ಲೇ ಅತ್ಯುತ್ತಮ ಪೊಲೀಸ್​ ಠಾಣೆ ಪಟ್ಟಿಯಲ್ಲಿ ಜಾಗ ಪಡೆದ ಮಾನ್ವಿ ಸ್ಟೇಷನ್​! ಇದು ರಾಜ್ಯಕ್ಕೇ ಮಾದರಿ

ಮಾನ್ವಿ(ರಾಯಚೂರು): ದೇಶದಲ್ಲೇ ಅತ್ಯುತ್ತಮ ಪೊಲೀಸ್​ ಠಾಣೆ ಪಟ್ಟಿಯಲ್ಲಿ ಮಾನ್ವಿ ಪಟ್ಟಣದ ಸ್ಟೇಷನ್​ ಸೇರಿದೆ. ಕೇಂದ್ರ ಗೃಹ ಸಚಿವಾಲಯ ಈ ವರ್ಷ ನಡೆಸಿದ ಸಮೀಕ್ಷೆಯಲ್ಲಿ ಮಾನ್ವಿ ಠಾಣೆಗೆ ಐದನೇ ಉತ್ತಮ ರ್ಯಾಂಕ್​ ದೊರಕಿದೆ.

ಕೇಂದ್ರದ ಗೃಹ ಸಚಿವಾಲಯ ಮತ್ತು ಪೊಲೀಸ್​ ಮಾಡರೈಸೇಷನ್​ ಡಿವಿಜನ್​ ನಡೆಸಿದ ಸಮೀಕ್ಷೆಯಲ್ಲಿ ದೇಶದಲ್ಲಿ 10 ಅತ್ಯುತ್ತಮ ಪೊಲೀಸ್​ ಠಾಣೆಗಳು ಆಯ್ಕೆ ಮಾಡಲಾಗಿತ್ತು. ಪ್ರಧಾನಿ ನಿರ್ದೇಶನದಂತೆ ಕಾರ್ಯಕ್ಷಮತೆ ಆಧಾರದ ಮೇಲೆ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಸಮೀಕ್ಷೆ ನಡೆದಿದ್ದು, ಮಾನ್ವಿ ಠಾಣೆ ಆಯ್ಕೆಯಾಗಿದ್ದು ರಾಜ್ಯ ಮತ್ತು ಜಿಲ್ಲೆಗೆ ಗರಿಮೆ ಹೆಚ್ಚಿದೆ. ಸುವ್ಯವಸ್ಥೆ ಕಟ್ಟಡ, ಸಿಬ್ಬಂದಿ ಶಿಸ್ತು ಮತ್ತು ಕಾರ್ಯದಕ್ಷತೆ, ಕಡತಗಳ ವಿಲೇವಾರಿ, ಮೂಲ ಸೌಕರ್ಯಗಳು, ಅಪರಾಧ ತಡೆಗೆ ಕೈಗೊಂಡ ಕ್ರಮಗಳು, ಸಂಚಾರ ಸುರಕ್ಷತೆ, ಅಪಘಾತ ತಡೆಗೆ ಪೋಲೀಸರ ಕಾರ್ಯ... ಈ ಎಲ್ಲ ಅಂಶಗಳನ್ನ ಗಣನೆಗೆ ತೆಗೆದುಕೊಂಡು ರ್ಯಾಂಕ್​ ನೀಡಲಾಗಿದೆ.

ಅತಿ ಹೆಚ್ಚು ವಾರಂಟ್​ ಜಾರಿ ಮಾಡಿರುವುದು, ಮಕ್ಕಳು-ಮಹಿಳೆಯರಿಗೆ ಠಾಣೆಯಲ್ಲಿ ತೋರಿಸುವಂತಹ ವಿಶೇಷ ಗೌರವ, ಕಳ್ಳತನ ಪ್ರಕರಣದಲ್ಲಿ ವಾರಸುದಾರರಿಗೆ ಮಾಲು ಹಿಂದಿರುಗಿಸಿರುವ ಸಾಧನೆ ದೊಡ್ಡದಿದೆ. ಡಿಜಿಟಲ್​ ಇಂಡಿಯಾ ಪರಿಕಲ್ಪನೆಯಂತೆ ಎಲ್ಲ ದಾಖಲೆಗಳನ್ನ ಕಂಪ್ಯೂಟರೀಕರಣ ಮಾಡಲಾಗಿದೆ. 2020ರಲ್ಲಿ ದಾಖಲಾದ 208 ಪ್ರಕರಣಗಳನ್ನು ಶೀಘ್ರಗತಿಯಲ್ಲಿ ತನಿಖೆ ಕೈಗೊಂಡು ವಿಲೇಮಾರಿ ಮಾಡಿ, ಪ್ರಸ್ತತ ಸಾಲಿನಲ್ಲಿ ದಾಖಲಾದ 202 ಪ್ರಕರಣಗಳ ಶೀಘ್ರ ತನಿಖೆ ಮಾಡಿ ವಿಲೆವಾರಿಗೆ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚು ಅಪರಾಧ ಪ್ರಕರಣಗಳ ನಡುವೆಯೇ ಕಡಿಮೆ ಸಂಖ್ಯೆ ಸಿಬ್ಬಂದಿ ಇದ್ದರೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಹೆಮ್ಮೆ ಈ ಠಾಣೆಗೆ ಇದೆ.

ಮಾನ್ವಿ ಠಾಣೆಗೆ ದೇಶದಲ್ಲೇ ಅತ್ಯುತ್ತಮ ಮಾದರಿ ಪೊಲೀಸ್​ ಠಾಣೆ ಎಂದು ಐದನೇ ಉತ್ತಮ ರ್ಯಾಂಕ್​ ಬಂದಿರುವುದು ಸಂತೋಷವಾಗಿದೆ. ಮೇಲಧಿಕಾರಿಗಳ ಆದೇಶಗಳ ಪಾಲನೆ, ಸಾರ್ವಜನಿಕರ ಬೆಂಬಲ ಹಾಗೂ ಠಾಣೆ ಸಿಬ್ಬಂದಿಯ ನಿಷ್ಠೆ ಪರಿಣಾಮ ಮಾದರಿ ಪೊಲೀಸ್​ ಠಾಣೆ ಎಂದು ಬಿರುದು ಪಡೆಯಲು ಸಾಧ್ಯವಾಗಿದೆ.

|ವೆಂಕಟಪ್ಪನಾಯಕ ಡಿವೈಎಸ್​ಪಿ