ಮಂಗಳೂರು: ಸುರತ್ಕಲ್ನ ಎನ್ಐಟಿಕೆ ಟೋಲ್ ತೆರವಿಗೆ ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ಮಂಗಳವಾರ ಟೋಲ್ಗೇಟ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದೆ.
ಟೋಲ್ ಗೇಟ್ ಕಿತ್ತೆಸೆಯಲು ನೇರ ಕಾರ್ಯಾಚರಣೆಗೆ ಕರೆ ನೀಡಿದ್ದ ಸಮಿತಿಯು ಸರ್ವೀಸ್ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಾ ಟೋಲ್ಗೇಟ್ ಬಳಿ ಬರುತ್ತಿರುವಾಗಲೇ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದಿದ್ದಾರೆ. ಆದಾಗ್ಯೂ ಹಲವರು ಟೋಲ್ಗೇಟ್ಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು. ಪೊಲೀಸರು ಹಲವರನ್ನು ಬಂಧಿಸಿದ್ದಾರೆ.
ಮಂಗಳೂರಿನ ಹೊರ ವಲಯದ ಸುರತ್ಕಲ್ನ ಟೋಲ್ಗೇಟ್ನಲ್ಲಿ ಟೋಲ್ ಸಂಗ್ರಹ ಸ್ಥಗಿತಗೊಳಿಸಬೇಕು ಎಂದು ನೂರಾರು ಮಂದಿ ಆಗ್ರಹಿಸಿದರು. ಟೋಲ್ ಕಿತ್ತೆಸೆಯೋದಾಗಿ ಟೋಲ್ ವಿರೋಧಿ ಸಮಿತಿ ಎಚ್ಚರಿಕೆ ನೀಡಿದ್ದ ಹಿನ್ನೆಲೆ ಟೋಲ್ ಸುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ವೇಳೆ ಟೋಲ್ಗೇಟ್ಗೆ ಮುತ್ತಿಗೆ ಹಾಕಿದ ಹಲವರನ್ನ ವಶಕ್ಕೆ ಪಡೆದ ಪೊಲೀಸರು ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತರಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂತು.
ಪ್ರತಿಭಟನಾಕಾರರು ರಾಜ್ಯ ಸರ್ಕಾರ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಮುಖಂಡರಾದ ವಿನಯ್ ಕುಮಾರ್ ಸೊರಕೆ, ಸಿಪಿಎಂ, ಡಿವೈಎಫ್ಐ ಮುಖಂಡರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.