ಬೆಂಗಳೂರು: ತಂಪುಪಾನೀಯ ಮತ್ತು ಬಿಸ್ಕತ್ ಸರಬರಾಜು ಮಾಡುವ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ತನ್ನ ಸಹೋದ್ಯೋಗಿಯ ಹೊಟ್ಟೆಗೆ ಹೊಡೆದು ಕೊಲೆ ಮಾಡಿದ್ದಾನೆ. ಭಾರತಿನಗರ ನಿವಾಸಿ ಬಿಹಾರ ಮೂಲದ ಪಿಂಟು ಕುಮಾರ್ (20) ಮೃತ.
ಹತ್ಯೆ ಮಾಡಿದ ಅಸ್ಸಾಂ ಮೂಲದ ನಿಪುದಾಸ್ (23) ಎಂಬಾತನನ್ನು ಬಂಧಿಸಲಾಗಿದೆ ಎಂದು ಭಾರತಿನಗರ ಠಾಣೆ ಪೊಲೀಸರು ತಿಳಿಸಿದ್ದಾರೆ. ಸರವಣ ಎಂಬುವರು ನಾರಾಯಣ ಪಿಳ್ಳೈ ರಸ್ತೆಯಲ್ಲಿ ತಂಪುಪಾನೀಯ ಹಾಗೂ ಬಿಸ್ಕತ್ ಸರಬರಾಜು ಮಾಡುವ ಏಜೆನ್ಸಿ ನಡೆಸುತ್ತಿದ್ದಾರೆ. ಇಲ್ಲಿ ನಿಪುದಾಸ್ ಹಾಗೂ ಪಿಂಟುಕುಮಾರ್ ಕೆಲಸ ಮಾಡಿಕೊಂಡಿದ್ದರು.
ಸೋಮವಾರ (ಏ.13) ಬೆಳಗ್ಗೆ 10.30ರಲ್ಲಿ ಕೆಲಸದ ವೇಳೆ ಇಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕುತ್ತಿಗೆ ಹಿಸುಕುತ್ತಿದ್ದ ಪಿಂಟುನಿಂದ ತಪ್ಪಿಸಿಕೊಳ್ಳಲು ಯತ್ನಿಸುವ ಭರದಲ್ಲಿ ಎದೆ ಹಾಗೂ ಹೊಟ್ಟೆ ಭಾಗಕ್ಕೆ ನಿಪುದಾಸ್ ಬಲವಾಗಿ ಹೊಡೆದಿದ್ದಾನೆ. ಅಸ್ವಸ್ಥಗೊಂಡ ಪಿಂಟುವನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.