ನ್ಯೂಸ್

ಕುಡಿಯಲು ಹಣ ಕೊಡದ ಪತ್ನಿಯನ್ನು ಬರ್ಬರವಾಗಿ ಕೊಂದ ಪಾಪಿ ಕುಡುಕ..; ಈತನಿಗೆ ಇನ್ನೋರ್ವ ಪತ್ನಿಯಿದ್ದಾಳೆ !

ಬಾಗಲಕೋಟೆ: ಸರ್ಕಾರ ಲಾಕ್​ಡೌನ್ ಮಧ್ಯೆ ಎಣ್ಣೆ ಅಂಗಡಿಗಳನ್ನೇನೋ ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಆದರೆ ಮೇ 4ರಂದು ಮದ್ಯದಂಗಡಿಗಳು ತೆರೆದ ಬಳಿಕ ಕುಡುಕರೆಲ್ಲ ಫುಲ್​ ಅಲರ್ಟ್​ ಆಗಿದ್ದಾರೆ. ಅವರಷ್ಟಕ್ಕೇ ಅವರು ಕಂಠಪೂರ್ತಿ ಕುಡಿದು, ತೂರಾಡಿಕೊಂಡಿದ್ದರೆ ಹೋಗಲಿ ಬಿಡಿ ಎನ್ನಬಹುದು. ಆದರೆ ಕುಡಿಯಲು ಹಣ ಬೇಕು ಎಂಬ ಕಾರಣಕ್ಕೆ ಕೊಲೆ, ಸುಲಿಗೆಯಂಥ ದುಷ್ಕೃತ್ಯಕ್ಕೆ ಕೆಲವರು ತೊಡಗಿದ್ದು ಆತಂಕ ಮೂಡಿಸಿದೆ.

ಈಗ ಇಲ್ಲೊಬ್ಬ ವ್ಯಕ್ತಿ ಇದೇ ಎಣ್ಣೆ ಕಾರಣಕ್ಕೆ ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಜಿಲ್ಲೆಯ ಇಳಕಲ್​ ನಗರದ ಜೋಷಿ ಗಲ್ಲಿ ಎಂಬಲ್ಲಿ ಘಟನೆ ನಡೆದಿದೆ. ಶಾರದಾ ಚವ್ಹಾಣ (32) ಕೊಲೆಯಾದ ಮಹಿಳೆ.

ಚಂದಪ್ಪ ಚವ್ಹಾಣ್​ ಎಂಬಾತ ಪತ್ನಿಯ ಬಳಿ ತೆರಳಿ ಕುಡಿಯಲು ಹಣ ಕೊಡು ಎಂದು ಕೇಳಿದ. ಅದಕ್ಕೆ ಶಾರದಾ ಒಪ್ಪಲಿಲ್ಲ. ಇದೇ ಸಿಟ್ಟಿಗೆ ಆಕೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದೆಯಿಂದ ಬೈಕ್​ನಲ್ಲಿ ಗುದ್ದಿ ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಾರದಾರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಕಳೆದ ಒಂದೂವರೆ ತಿಂಗಳಿಂದಲೂ ಈತ ಕುಡಿಯಲು ಮದ್ಯ ಸಿಗದೆ ಪರದಾಡುತ್ತಿದ್ದ. ಮೊದಲಿನಿಂದಲೂ ಪತ್ನಿ ಜತೆ ಜಗಳವಾಡುತ್ತಿದ್ದ. ಶಾರದಾ ಬೇರೆಯವರ ಮನೆಯ ಕೆಲಸ ಮಾಡಿ ಹಣ ಕೂಡಿಟ್ಟಿದ್ದರು. ನಿನ್ನೆ ಮದ್ಯದ ಅಂಗಡಿ ತೆರೆಯುತ್ತಿದ್ದಂತೆ ಪತ್ನಿಯ ಬಳಿ ಹೋಗಿ ಹಣವನ್ನು ಕೊಡು ಎಂದು ಪೀಡಿಸಿದ್ದಾನೆ. ಆದರೆ ಆಕೆ ಒಪ್ಪಿರಲಿಲ್ಲ.

ಚಂದಪ್ಪನಿಗೆ ಇನ್ನೋರ್ವ ಪತ್ನಿಯೂ ಇದ್ದಾಳೆ. ಆತನನ್ನು ಇಳಕಲ್ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)