ನ್ಯೂಸ್

ಪ್ಯಾಲೆಸ್ತೀನಿಯರ ಮೂಲೋತ್ಪಾಟನೆ: ಇಸ್ರೇಲ್​ನಿಂದ ದೀರ್ಘಕಾಲೀನ ಯೋಜನೆ, ಡರ್ಹಮ್ ವಿವಿ ಪ್ರಾಧ್ಯಾಪಕ ವಿಶ್ಲೇಷಣೆ

ಡರ್ಹಮ್ (​ಬ್ರಿಟನ್): ಪ್ಯಾಲೆಸ್ತೀನಿಯರನ್ನು ಗಾಜಾದಿಂದ ಸಂಪೂರ್ಣವಾಗಿ ಹೊಡೆದೋಡಿಸಿ ಅವರನ್ನು ಬಲವಂತದಿಂದ ಈಜಿಪ್ಟ್​ನ ಸಿನಾಯ್ ಪರ್ಯಾಯ ದ್ವೀಪದಲ್ಲಿ ನೆಲೆಗೊಳಿಸುವ ಯೋಜನೆ ಯೊಂದನ್ನು ಇಸ್ರೇಲ್ ರೂಪಿಸಿರುವ ಆಘಾತಕಾರಿ ಅಂಶವನ್ನು ಡರ್ಹಮ್ ವಿಶ್ವವಿದ್ಯಾಲಯದ ಶಾಂತಿ ಮತ್ತು ಭದ್ರತೆ ಕುರಿತ ಪ್ರಾಧ್ಯಾಪಕ ರಾಬ್ ಗೀಸ್ಟ್ ಬಹಿರಂಗಪಡಿಸಿದ್ದಾರೆ.

ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಹಠಾತ್ ದಾಳಿ ನಡೆಸಿದ ಒಂದು ವಾರದ ಅವಧಿಯಲ್ಲಿ ಇಸ್ರೇಲ್​ನ ಗುಪ್ತಚರ ಸಚಿವಾಲಯ ಸಲ್ಲಿಸಿದ ಯೋಜನೆ ಯಲ್ಲಿ ಈ ಘೋರ ಅಂಶ ಅಡಕವಾಗಿದೆ. ಗಾಜಾ ಪಟ್ಟಿ ಮೇಲೆ ಅಣುಬಾಂಬ್ ದಾಳಿ ಮಾಡಬೇಕೆಂಬ ಇಸ್ರೇಲಿ ಸಚಿವರೊಬ್ಬರ ಹೇಳಿಕೆಯಂತೂ ಇನ್ನೂ ಆಘಾತಕಾರಿ ಯಾದುದು. ಇದು ಮಾರಣ ಹೋಮ ನಡೆಸುವ ಅಮಾನವೀಯ ಹುನ್ನಾರವೇ ಎಂಬ ಜಿಜ್ಞಾಸೆ ಉಂಟಾಗಿದೆ ಎಂದು ಗೀಸ್ಟ್ ವಿಶ್ಲೇಷಿಸಿದ್ದಾರೆ. ಇದೇ ತಿಂಗಳು ಟೆಲ್ ಅವೀವ್​ನಲ್ಲಿ ನಡೆದ ತೀವ್ರ-ಬಲಪಂಥೀಯರ ರ್ಯಾಲಿಯೊಂದರಲ್ಲಿ ಮುಗ್ಧ ನಗುಮೊಗದ ಇಬ್ಬರು ಯೆಹೂದಿ-ಇಸ್ರೇಲಿ ಮಕ್ಕಳ ಚಿತ್ರವಿರುವ ಪೋಸ್ಟರ್ ಪ್ರದರ್ಶಿಸಲಾಗಿದ್ದು ಇದು ಭವಿಷ್ಯದಲ್ಲಿ ಗಾಜಾದಲ್ಲಿನ ಪರಿಸ್ಥಿ್ಥಯ ಸಂಕೇತದಂತೆ ಕಾಣುತ್ತದೆ. ಅಂದರೆ, ಅಲ್ಲಿಂದ ಪ್ಯಾಲೆಸ್ತೀನಿಯರನ್ನು ಪೂರ್ಣ ಒಕ್ಕಲೆಬ್ಬಿಸಿ ಯೆಹೂದಿಗಳು ನೆಲೆಯೂರುವ ಅಪಾಯಕಾರಿ ಸಿದ್ಧಾಂತದ ಸಂಕೇತದಂತೆ ಇದೆ ಎಂದು ಗೀಸ್ಟ್ ಅಭಿಪ್ರಾಯಪಟ್ಟಿದ್ದಾರೆ.

ಫ್ರಾನ್ಸ್ ಅಧ್ಯಕ್ಷರ ಆಗ್ರಹ

ಗಾಜಾ ಪಟ್ಟಿ ಮೇಲಿನ ಬಾಂಬಿಂಗ್ ಅನ್ನು ಕಟುವಾಗಿ ಖಂಡಿಸಿರುವ ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರನ್, ಕದನ ವಿರಾಮ ಘೋಷಿಸುವಂತೆ ಇಸ್ರೇಲ್ ಅಧ್ಯಕ್ಷರನ್ನು ಆಗ್ರಹಿಸಿದ್ದಾರೆ. ಯುದ್ಧ ವಿರಾಮದಿಂದ ಇಸ್ರೇಲ್​ಗೇ ಲಾಭವಾಗುತ್ತದೆ ಎಂದಿದ್ದಾರೆ. ‘ಬಾಂಬಿಂಗ್ ಅಸಮರ್ಥನೀಯ’ ಎಂದು ಬಿಬಿಸಿ ಸಂದರ್ಶನವೊಂದರಲ್ಲಿ ಮ್ಯಾಕ್ರನ್ ಹೇಳಿದ್ದಾರೆ.

ಕಿಯೆವ್ ಮೇಲೆ ರಷ್ಯಾ ದಾಳಿ

ಯೂಕ್ರೇನ್ ರಾಜಧಾನಿ ಕಿಯೆವ್ ಮೇಲೆ ರಷ್ಯಾ ಬಾಂಬ್ ದಾಳಿಯನ್ನು ತೀವ್ರಗೊಳಿಸಿದೆ. ಈ ನಡುವೆ, ಯೂಕ್ರೇನ್​ನ ಡ್ರೋನ್​ಗಳು ಮಾಸ್ಕೋ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಸ್ಮೊಲೆನ್​ಸ್ ಪ್ರದೇಶದಲ್ಲಿ ದಾಳಿ ಮಾಡಿವೆ ಎಂದು ರಷ್ಯಾ ಅಧಿಕಾರಿಗಳು ಆರೋಪಿಸಿದ್ದಾರೆ. ಕಿಯೆವ್ ಮೇಲೆ ದಾಳಿ ಮಾಡಿದ ರಷ್ಯಾದ ಕ್ಷಿಪಣಿ ಹೊಡೆದುರುಳಿಸಿದ್ದಾಗಿ ಯೂಕ್ರೇನ್ ವಾಯು ಪಡೆ ದೃಢಪಡಿಸಿದೆ.

ಇಸ್ರೇಲ್ ಮೇಲೆ ಹೆಚ್ಚುತ್ತಿರುವ ಒತ್ತಡ

ಆಸ್ಪತ್ರೆಗಳ ಪಕ್ಕ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹಮಾಸ್ ಮತ್ತು ಇಸ್ರೇಲಿ ಪಡೆಗಳ ನಡುವೆ ಕಾಳಗ ತೀವ್ರಗೊಂಡು ಸಾವಿನ ಸಂಖ್ಯೆ ಏರುತ್ತಿರುವುದರಿಂದ ಗಾಜಾದಲ್ಲಿ ಪ್ಯಾಲೆಸ್ತೀನಿ ನಾಗರಿಕರನ್ನು ರಕ್ಷಿಸಲು ಅಧಿಕ ಕ್ರಮಗಳನ್ನು ಕೈಗೊಳ್ಳುವಂತೆ ಇಸ್ರೇಲ್ ಮೇಲೆ ಪ್ರಮುಖ ಮಿತ್ರ ದೇಶ ಅಮೆರಿಕ ಸಹಿತ ಜಾಗತಿಕ ಒತ್ತಡ ಹೆಚ್ಚಾಗುತ್ತಿದೆ. ಅಲ್-ಶಿಫಾ ಆಸ್ಪತ್ರೆ ಮೇಲೆ ಇಸ್ರೇಲ್ ಸೈನಿಕರು ನಡೆಸಿದ ಬಾಂಬ್ ದಾಳಿಯಿಂದ (ಬಾಂಬಿಂಗ್) 13 ಜನರು ಮೃತಪಟ್ಟಿದ್ದಾರೆ ಎಂದು ಹಮಾಸ್ ವಕ್ತಾರರು ಹೇಳಿದ್ದಾರೆ. ಗಾಜಾ ನಗರದ ಅಲ್-ಬರ್ಖಾ ಶಾಲೆ ಮೇಲಿನ ಬಾಂಬಿಂಗ್​ನಲ್ಲಿ ಇನ್ನೂ 50 ಜನರು ಹತರಾಗಿದ್ದಾರೆ.

ಮೃತ ಇಸ್ರೇಲಿಗರ ಇಳಿಕೆ: ಈ ನಡುವೆ, ಅಕ್ಟೋಬರ್ 7ರಂದು ಹಮಾಸ್ ನಡೆಸಿದ ಆಕ್ರಮಣದಲ್ಲಿ ಹತರಾದ ಇಸ್ರೇಲಿಗರ ಸಂಖ್ಯೆ ಅಂದಾಜು 1,200 ಆಗಿದೆ ಎಂದು ಇಸ್ರೇಲ್ ಸರ್ಕಾರ ಪರಿಷ್ಕರಿಸಿದೆ. ಈ ದಾಳಿಯಲ್ಲಿ 1,400 ಜನರು ಸತ್ತಿದ್ದಾರೆಂದು ಹೇಳಲಾಗುತ್ತಿತ್ತು. ಇಸ್ರೇಲ್ ಘೋಷಿಸಿರುವ ಯುದ್ಧದಲ್ಲಿ ಅಂದಾಜು 12,000 ಪ್ಯಾಲೆಸ್ತೀನಿಯರು ಪ್ರಾಣ ಕಳೆದುಕೊಂಡಿದ್ದಾರೆ.

ಪ್ರತಿ 10 ನಿಮಿಷಕ್ಕೆ ಒಂದು ಮಗುವಿನ ಸಾವು

ಗಾಜಾ ಪಟ್ಟಿಯಲ್ಲಿ ಸರಾಸರಿ ಪ್ರತಿ ಹತ್ತು ನಿಮಿಷಕ್ಕೆ ಒಂದು ಮಗು ಸಾಯುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕ ಟೆಡ್ರೋಸ್ ಅಧಾನಂ ಘೇಬ್ರಿಯೆಸಸ್ ಆತಂಕ ವ್ಯಕ್ತಪಡಿಸಿದ್ದಾರೆ. ವಿಶ್ವ ಸಂಸ್ಥೆ ಭದ್ರತಾ ಮಂಡಳಿಗೆ ಶುಕ್ರವಾರ ಈ ವಿಷಯ ತಿಳಿಸಿರುವ ಘೇಬ್ರಿಯೆಸಸ್, ಗಾಜಾದಲ್ಲಿ ‘ಎಲ್ಲಿಯೂ ಯಾರೂ ಸುರಕ್ಷಿತರಲ್ಲ’ ಎಂದು ಎಚ್ಚರಿಸಿದ್ದಾರೆ. ಗಾಜಾದ 36 ಆಸ್ಪತ್ರೆಗಳ ಪೈಕಿ ಅರ್ಧದಷ್ಟು ಹಾಗೂ ಮೂರನೇ ಎರಡರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯಾಚರಿಸುತ್ತಿಲ್ಲ ಎಂದಿದ್ದಾರೆ.

ಇನ್​ಕ್ಯುಬೇಟರ್​ನಲ್ಲೇ ನವಜಾತ ಶಿಶು ಮರಣ: ಇಂಧನ ಕೊರತೆಯಿಂದಾಗಿ ಪ್ಯಾಲೆಸ್ತೀನಿ ಪ್ರದೇಶದ ಅತಿ ದೊಡ್ಡ ಆಸ್ಪತ್ರೆಯಾದ ಅಲ್-ಶಿಫಾದ ಕಾರ್ಯಾಚರಣೆಯನ್ನು ಶನಿವಾರ ಸ್ಥಗಿತಗೊಳಿಸಲಾಗಿದೆ. ಇದರ ಪರಿಣಾಮ ವಾಗಿ ಒಂದು ಶಿಶು ಇನ್​ಕ್ಯುಬೇಟರ್​ನಲ್ಲೇ ಕೊನೆಯುಸಿರೆಳೆದಿದೆ ಎಂದು ಹಮಾಸ್ ಆರೋಗ್ಯ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಈ ಆಸ್ಪತ್ರೆಯಲ್ಲಿ 45 ಮಕ್ಕಳಿವೆ.