ಬೆಂಗಳೂರು: ಲಿವ್ ಇನ್ ರಿಲೇಶನ್ (ಸಹಜೀವನ)ನಲ್ಲಿದ್ದ ಸುನೀತಾ ಮತ್ತು ಪ್ರಶಾಂತ್ ಎಂಬುವವರ ನಡುವೆ ಮದುವೆ ವಿಚಾರವಾಗಿ ವೈಮನಸ್ಸು ಉಂಟಾಗಿತ್ತು. ಇದು ನಿತ್ಯ ಜಗಳಕ್ಕೂ ಕಾರಣವಾಗಿತ್ತು. ಇದರಿಂದ ಬೇಸತ್ತ ಪ್ರಶಾಂತ್ ಆಂಧ್ರ ಮೂಲದ ಸುನೀತಾ ಎಂಬಾಕೆಯನ್ನು ಕೊಲೆ ಮಾಡಿದ್ದಾನೆ. ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಿದ್ದ. ಇದೀಗ ಪೊಲೀಸ್ ತನಿಖೆಯಿಂದ ಪ್ರಶಾಂತ್ ಆರೋಪಿ ಎಂಬ ಸತ್ಯಾಂಶ ಹೊರಬಿದ್ದಿದೆ.
ಕೊಲೆಯಾಗಿ ಹೋಗಿರುವ ಸುನೀತಾ ಆಂಧ್ರಪ್ರದೇಶ ಮೂಲದವಳು. ಕೌಟುಂಬಿಕ ಕಲಹದಿಂದ ಪತಿಯನ್ನು ತೊರೆದು ಬೆಂಗಳೂರಿನಲ್ಲಿರುವ ಪರಿಚಯಸ್ಥರ ಮನೆಗೆ ಬಂದು ವಾಸವಾಗಿದ್ದಳು. ನಂತರ ಬೆಂಗಳೂರಿನಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಹೀಗಿದ್ದಾಗ ಪ್ರಶಾಂತ್ ಎಂಬಾತನ ಪರಿಚಯವಾಗಿದೆ. ಸುನೀತಾ ವಾಸವಿದ್ದಲ್ಲೇ ಪ್ರಶಾಂತ್ ಕೂಡ ನೆಲೆಸಿದ್ದ. ಇದು ಒಬ್ಬರಿಗೊಬ್ಬರ ನಡುವೆ ಸಲುಗೆ ಬೆಳೆಯಲು ಕಾರಣವಾಗಿದೆ.
ಪ್ರಶಾಂತ್-ಸುನೀತಾ ಪರಿಚಯ ನಿಧಾನವಾಗಿ ಪ್ರೀತಿಗೆ ತಿರುಗಿದೆ. ಪ್ರಶಾಂತ್, ಸುನೀತಾಗಿಂತ ವಯಸ್ಸಿನಲ್ಲಿ ಮೂರು ವರ್ಷ ಚಿಕ್ಕವನು. ವಯಸ್ಸಿನ ಅಂತರವಿದ್ದರೂ ಇಬ್ಬರ ನಡುವೆ ಗಾಢವಾದ ಪ್ರೀತಿ ಬೆಳೆದಿತ್ತು. ಹೀಗಾಗಿ ಇಬ್ಬರೂ ಶ್ರೀನಿವಾಸ್ ಸ್ಟ್ರೀಟ್ನ ಮನೆಯೊಂದರಲ್ಲಿ ಲಿವ್ ಇನ್ ರಿಲೇಶನ್ನಲ್ಲಿ ಒಟ್ಟಾಗಿ ಸಮಯ ಕಳೆಯುದ್ದರು. ಈ ವೇಳೆ ಪ್ರಶಾಂತ್ ಮದುವೆಯಾಗುವುದಾಗಿ ಸುನೀತಾ ಬಳಿ ಹೇಳಿಕೊಂಡಿದ್ದ.
ಮದುವೆಯಾಗುವುದಾಗಿ ಹೇಳಿ ನಾಲ್ಕು ವರ್ಷ ಕಳೆದರೂ ಪ್ರಶಾಂತ್ ಮಾತ್ರ ಸುಮ್ಮನಿದ್ದ. ಹೀಗಾಗಿ ಸುನೀತಾ ಮದುವೆ ಮಾಡಿಕೋ ಎಂದು ಹೇಳಿದ್ದಾಳೆ. ಇದಕ್ಕೆ ಒಪ್ಪದ ಪ್ರಶಾಂತ್, ಮನೆಯಲ್ಲಿ ತಂಗಿ ಇದ್ದಾಳೆ. ಅವಳ ಮದುವೆ ಆಗಬೇಕು. ನಂತರ ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ. ಇದರಿಂದ ಬೇಸತ್ತ ಸುನೀತಾ, ಬೇಗ ಮದುವೆ ಆಗಬೇಕೆಂದು ಪಟ್ಟು ಹಿಡಿದಿದ್ದಾಳೆ.
ಮದುವೆ ವಿಚಾರವಾಗಿ ಸುನೀತಾ ವರ್ತೆನೆಯಿಂದ ಪ್ರಶಾಂತ್ ರೋಸಿ ಹೋಗಿದ್ದ. ಅದೊಂದು ದಿನ ಮತ್ತೆ ಇವರಿಬ್ಬರ ನಡುವೆ ಮದುವೆ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಪ್ರಶಾಂತ್, ಸುನೀತಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ತಾನು ಕೊಲೆ ಮಾಡಿರುವುದು ಯಾರಿಗೂ ಅನುಮಾನ ಬರಬಾರದೆಂದು ಮೃತದೇಹವನ್ನು ನೇಣು ಬಿಗಿದ ಸ್ಥಿತಿಯಲ್ಲಿ ನೇತು ಹಾಕಿ, ಆತ್ಮಹತ್ಯೆ ಮಾಡಿಕೊಂಡಿರುವ ನಾಟಕವಾಡಿದ್ದಾನೆ.
ಮೃತದೇಹವನ್ನು ಪರೀಕ್ಷಿಸಿದ ವೈದ್ಯರಿಗೆ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕೂಡಲೇ ವೈದ್ಯರು ಮೃತದೇಹದ ಕತ್ತಿನಲ್ಲಿ ಗಂಭೀರ ಗಾಯವಾಗಿದೆ. ಹೀಗಾಗಿ ಕೊಲೆ ನಡೆದಿರಬಹುದು ಎಂದು ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು, ಸುನೀತಾಳ ಮೊಬೈಲ್ ಪರಿಶೀಲಿಸಿ ಪ್ರಶಾಂತ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.