ನ್ಯೂಸ್

ಭಾರತೀಯ ಭೂ ಸೇನಾ ಮುಖ್ಯಸ್ಥರಾಗಿ ಲೆ.ಜ. ಮನೋಜ್ ಪಾಂಡೆ ಅಧಿಕಾರ ಸ್ವೀಕಾರ

ನವದೆಹಲಿ: ಭಾರತೀಯ ಭೂ ಸೇನಾ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್​ ಜನರಲ್ ಮನೋಜ್ ಪಾಂಡೆ ಅವರು ಶನಿವಾರ ಅಧಿಕಾರ ಸ್ವೀಕರಿಸಿದರು.

ಲೆ.ಜ. ಎಂ.ಎಂ. ನರವಣೆ ಅವರ ಸೇವಾವಧಿ ಏ.30ಕ್ಕೆ ಮುಕ್ತಾಯವಾಗಲಿದ್ದು, ಈ ಸ್ಥಾನಕ್ಕೆ ಕೇಂದ್ರ ಸರ್ಕಾರ ಕಳೆದ ವಾರವೇ ಮನೋಜ್ ಪಾಂಡೆ ಅವರನ್ನು ಆಯ್ಕೆ ಮಾಡಿ ಆದೇಶಿಸಿತ್ತು. ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಮನೋಜ್​ ಪಾಂಡೆ ಅವರು ಶನಿವಾರ ದೇಶದ ಭೂಸೇನೆಯ 29ನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಕಾರ್ಪ್ಸ್ ಆಫ್ ಇಂಜಿನಿಯರ್ಸ್‌ನ ಮೊದಲ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಭೂಸೇನೆ 117 ಎಂಜಿನಿಯರ್​ ರೆಜಿಮೆಂಟ್​ ಅನ್ನು ಮುನ್ನಡೆಸಿದ ಅನುಭವ ಮನೋಜ್​ ಪಾಂಡೆ ಅವರಿಗಿದೆ. ಈ ಹಿಂದೆ ಸಿಕ್ಕಿಂ ಮತ್ತು ಅರುಣಾಚಲಪ್ರದೇಶ ವಲಯಗಳಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ರಕ್ಷಣೆ ಮಾಡುವ ಜವಾಬ್ದಾರಿ ಹೊಂದಿದ್ದ ಪೂರ್ವ ಸೇನಾ ಕಮಾಂಡ್‌ನ ಮುಖ್ಯಸ್ಥರಾಗಿದ್ದರು.