‘ಹಿಮಾಚಲಪ್ರದೇಶದಲ್ಲಿ ಪರಿಸರ ಸಮತೋಲನಕ್ಕೆ ಗಮನ ಕೊಡದಿದ್ದರೆ ಇಡೀ ರಾಜ್ಯವೇ ಒಂದು ದಿನ ನಿರ್ನಾಮವಾಗಿಬಿಡಬಹುದು’ ಎಂದು ಕಳೆದ ವಾರ ಸುಪ್ರೀಂ ಕೋರ್ಟ್ ಎಚ್ಚರಿಸಿತ್ತು. ಇದೇ ಮಾತು ಉತ್ತರಾಖಂಡಕ್ಕೂ ಅನ್ವಯಿಸುತ್ತದೆ. ದೇವಭೂಮಿಯಲ್ಲಿ ಮೊನ್ನೆ ಕಂಡುಬಂದ ಪ್ರಕೃತಿಯ ರೌದ್ರಾವತಾರ ಇಡೀ ದೇಶವನ್ನೇ ನಡುಗಿಸಿದೆ. ಮೇಘಸ್ಪೋಟದಿಂದ ಉಂಟಾದ ಭಾರಿ ಪ್ರವಾಹವು ಧರಾಲಿ ಎಂಬ ಒಂದು ಗ್ರಾಮವನ್ನೇ ನುಂಗಿಹಾಕಿದೆ. ಇದನ್ನು ಕೇವಲ ಇನ್ನೊಂದು ವಿಪತ್ತು ಎಂದು ತಳ್ಳಿಹಾಕುವಂತಿಲ್ಲ. ಈ ದುರಂತವು ಭಾರತದ ಹಿಮಾಲಯ ರಾಜ್ಯಗಳಿಗೆ ಅನುಸರಿಸುತ್ತಿರುವ ಅಭಿವೃದ್ಧಿ ಮಾದರಿಯ ವೈಫಲ್ಯವನ್ನು ಎತ್ತಿ ತೋರಿಸಿದೆ.
ಹಿಮಾಲಯದ ತೀವ್ರ ಇಳಿಜಾರಿನ ಕಣಿವೆಗಳು, ವಿಶಿಷ್ಟ ಭೌಗೋಳಿಕ ರಚನೆಗಳು, ವೈವಿಧ್ಯಮಯ ಮತ್ತು ಸೂಕ್ಷ್ಮ ಹವಾಮಾನವು ಆ ಪ್ರದೇಶವನ್ನು ಪ್ರಕೃತಿ ವೈಪರೀತ್ಯಗಳಿಗೆ ಗುರಿ ಮಾಡುತ್ತಲೇ ಇರುತ್ತದೆ. ಅಲ್ಲಿನ ಸರಾಸರಿ ತಾಪಮಾನ ಪ್ರತಿ ವರ್ಷವೂ ಜಾಗತಿಕ ಸರಾಸರಿಗಿಂತ ವೇಗವಾಗಿ ಏರುತ್ತಿದೆ. ಇದರಿಂದಾಗಿ ಅನಿರೀಕ್ಷಿತ ಮತ್ತು ಅತಿಯಾದ ಮಳೆ, ಮೇಘಸ್ಪೋಟ, ಆಕಸ್ಮಿಕ ಪ್ರವಾಹ ಸಾಮಾನ್ಯವಾಗಿವೆ. ಕಾಡುಗಳ ನಾಶ, ಅನಿಯಂತ್ರಿತ ವಾಹನ ಸಂಚಾರ ಈ ವಿನಾಶಕಾರಿ ಘಟನೆಗಳ ಸಾಧ್ಯತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಧರಾಲಿಯಲ್ಲಿ ಹಿಮಪ್ರವಾಹದ ನೀರು ಸಹಜವಾಗಿ ಹರಿದುಕೊಂಡು ಹೋಗಬೇಕಾಗಿದ್ದ ಸ್ಥಳದಲ್ಲಿಯೇ ಕಟ್ಟಡಗಳು ತಲೆಎತ್ತಿದ್ದವು ಎಂಬುದು ಗಮನಾರ್ಹ. ಸುಮಾರು ಮೂರು ಡಜನ್ ಹೊಟೇಲ್ಗಳು, ಹೋಂಸ್ಟೇಗಳು ಮತ್ತು ಅಂಗಡಿಗಳು ನೀರಿನ ಸಹಜಹರಿವಿನ ಹಾದಿಯಲ್ಲಿದ್ದವು. ಎಲ್ಲವೂ ಸರಿಯಿದ್ದಾಗ ಇವು ನದಿತೀರದ ಆಕರ್ಷಣೆಗಳು ನಿಜ. ಆದರೆ ಪ್ರಾಕೃತಿಕ ವಿಕೋಪದ ಸಂದರ್ಭಗಳನ್ನೂ ಗಮನದಲ್ಲಿ ಇಟ್ಟುಕೊಂಡು ಇಂತಹ ಸ್ಥಳಗಳಲ್ಲಿ ಕಟ್ಟಡಗಳನ್ನು ನಿರ್ವಿುಸಬೇಕಾಗುತ್ತದೆ.
ಸರ್ಕಾರದ ಚಾರ್ಧಾಮ್ ಯೋಜನೆಯಿಂದ ಧರಾಲಿಯಂತಹ ಪ್ರದೇಶಗಳು ಪ್ರಯೋಜನ ಪಡೆದಿವೆ. ವಿಶಾಲವಾದ ಹೆದ್ದಾರಿಗಳು ಪ್ರಯಾಣವನ್ನು ಸುಗಮಗೊಳಿಸಿವೆ. ಗಂಗೋತ್ರಿ, ಬದರಿನಾಥ, ಕೇದಾರನಾಥದಂತಹ ಸ್ಥಳಗಳಿಗೆ ಪ್ರವಾಸಿಗರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿವೆ. ಕಳೆದ ಶತಮಾನದ ಐವತ್ತರ ದಶಕದಲ್ಲಿ ಬದರಿನಾಥವನ್ನು ತಲುಪಲು ಜನರು 4 ದಿನ ನಡೆಯಬೇಕಿತ್ತು. ಅರವತ್ತರ ದಶಕದಲ್ಲಿ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ವಾರ್ಷಿಕ 2 ಲಕ್ಷಕ್ಕೆ ಏರಿತು. ಈಗ ವಾರ್ಷಿಕ 15 ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡುತ್ತಿದ್ದಾರೆ. ಇಷ್ಟು ಪ್ರವಾಸಿಗರು ಮತ್ತು ಅವರ ವಾಹನಗಳ ಹರಿವು ಅಲ್ಲಿನ ವ್ಯಾಪಾರಕ್ಕೆ ಒಳ್ಳೆಯದಾದರೂ, ಪ್ರಕೃತಿಗೆ ಅಪಾಯಕಾರಿ. ಕಾಡುಗಳನ್ನು ಕಡಿದು ರಸ್ತೆಗಳನ್ನು ವಿಶಾಲಗೊಳಿಸಬೇಕಾಗುತ್ತದೆ. ಗುಡ್ಡಗಾಡು, ನದಿತೀರಗಳಲ್ಲಿ ಕಾಂಕ್ರೀಟ್ ಕಟ್ಟಡಗಳು ತಲೆಎತ್ತುತ್ತವೆ.
ಧರಾಲಿ ಗ್ರಾಮದ ಘಟನೆಯ ಭೀಕರತೆಯನ್ನು ನೋಡಿ, ಇದೀಗ ಎಲ್ಲ ರಾಜ್ಯಗಳೂ ತಮ್ಮ ತಮ್ಮ ಪ್ರಾಕೃತಿಕ ತಾಣಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮತ್ತು ವಿಪರೀತ ನಗರೀಕರಣದ ಬಗ್ಗೆ ಮರುಚಿಂತನೆ ಮಾಡತೊಡಗಿವೆ. ರಸ್ತೆ, ಸೇತುವೆ, ಪ್ರವಾಸೋದ್ಯಮ ಮುಂತಾದ ಯೋಜನೆಗಳಲ್ಲಿ ಪರಿಸರಸ್ನೇಹಿ ಮತ್ತು ವೈಜ್ಞಾನಿಕ ಮಾರ್ಗಗಳನ್ನು ಅನುಸರಿಸುವುದು ಅನಿವಾರ್ಯ ಎಂಬ ಪಾಠವನ್ನು ಈಗ ಪ್ರಕೃತಿಯೇ ಹೇಳಿಕೊಟ್ಟಿದೆ. ಆಡಳಿತಗಾರರು ಅದಕ್ಕೆ ಕಿವಿಗೊಡಬೇಕಿದೆ. ಕೆಲ ವರ್ಷಗಳ ಹಿಂದಿನ ಮಳೆಗಾಲದಲ್ಲಿ ಭಾರಿ ನಷ್ಟ ಅನುಭವಿಸಿದ ಕರ್ನಾಟಕ, ಕೇರಳವೂ ಸೇರಿದಂತೆ ಎಲ್ಲ ರಾಜ್ಯಗಳಿಗೂ ಇದು ಅನ್ವಯವಾಗುತ್ತದೆ.