ಉಡುಪಿ: ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶೇಕಡಾ 40 ಪರ್ಸೆಂಟೇಜ್ ಆರೋಪ ಮಾಡಿದ್ದ ಬೆಳಗಾವಿಯ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ ಪಾಟೀಲ್ ಡೆತ್ನೋಟ್ ಬರೆದಿಟ್ಟು ಆತ್ಮಹತ್ಮೆ ಮಾಡಿಕೊಂಡಿದ್ದಾರೆ.
ಸೋಮವಾರ ತಡರಾತ್ರಿ ಮಾಧ್ಯಮಪತ್ರಿನಿಧಿಗಳಿಗೆ ವಾಟ್ಸ್ಆ್ಯಪ್ ಮೂಲ ಡೆತ್ನೋಟ್ ಕಳಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಂದೇಶ ರವಾನಿಸಿದ್ದರು. 'ನನ್ನ ಸಾವಿಗೆ ಸಚಿವ ಕೆ.ಎಸ್.ಈಶ್ವರಪ್ಪ ಅವರೇ ಕಾರಣ. ಸಚಿವರಿಗೆ ಶಿಕ್ಷೆಯಾಗಬೇಕು, ನನ್ನೆಲ್ಲಾ ಆಸೆಗಳನ್ನ ಬದಿಗೊತ್ತಿ ಆತ್ಮಹತ್ಯೆಯ ನಿರ್ಧಾರ ಮಾಡಿದ್ದೇನೆ. ನನ್ನ ಹೆಂಡತಿ-ಮಕ್ಕಳಿಗೆ ಪ್ರಧಾನಿಗಳು, ಮುಖ್ಯಮಂತ್ರಿಗಳು, ಬಿ.ಎಸ್.ಯಡಿಯೂರಪ್ಪ ಸಹಾಯ ಮಾಡಬೇಕು' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಡೆತ್ನೋಟ್ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಸಂತೋಷ ಪಾಟೀಲ್ಗಾಗಿ ಪೊಲೀಸರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಉಡುಪಿಯ ಶಾಂಭವಿ ಲಾಡ್ಜಿನಲ್ಲಿ ಸಂತೋಷ್ ಮೃತದೇಹ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ. ಪಕ್ಕದ ಕೊಠಡಿಯಲ್ಲಿ ಸಂತೋಷ್ರ ಗೆಳೆಯರಿಬ್ಬರು ಪತ್ತೆಯಾಗಿದ್ದಾರೆ ಎನ್ನಲಾಗಿದೆ. ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ.
ಉಡುಪಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪದ ಶಾಂಭವಿ ಹೋಟೆಲ್ಸ್ ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್ನಲ್ಲಿ ರೂಂ ನಂಬರ್ 207ರಲ್ಲಿ ಸಂತೋಷ್ ಶವವಾಗಿ ಪತ್ತೆಯಾಗಿದ್ದಾರೆ. ಬಾಯಿಯಲ್ಲಿ ನೊರೆ ಬಂದಿದ್ದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.