ಕೋಲಾರ: ದೇವರ ಕಾರ್ಯಕ್ರಮದಲ್ಲಿ ನಂಗಾನಾಚ್ ಡಾನ್ಸ್ ಮಾಡಿದ್ದ ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯನ ವಿರುದ್ಧ ಕೇಸ್ ದಾಖಲಾಗಿದೆ.
ಕೆಜಿಎಫ್ ತಾಲೂಕಿನ ಶ್ರೀನಿವಾಸಸಂದ್ರ ಗ್ರಾಪಂ ವ್ಯಾಪ್ತಿಯ ಮೇಲುಪಲ್ಲಿಯಲ್ಲಿ ನಡೆದ ಗಂಗಮಾಂಬಾ ಜಾತ್ರೆ ನಡೆಯುತ್ತಿದ್ದು, ಈ ಹಿನ್ನೆಲೆ ಫೆ.8ರಂದು ರೆಕಾರ್ಡ್ ಡ್ಯಾನ್ಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ತುಂಡು ಬಟ್ಟೆ ಹಾಕಿಕೊಂಡು ವೇದಿಕೆಯಲ್ಲಿ ಡಾನ್ಸ್ ಮಾಡುತ್ತಿದ್ದ ನರ್ತಕಿಯರ ಜತೆ ಜನಪ್ರತಿನಿಧಿಗಳೂ ಕುಣಿದುಕುಪ್ಪಳಿಸಿದ್ದರು. ಧಾರ್ಮಿಕ ಕಾರ್ಯಕ್ರಮ ನಡೆಯಬೇಕಿದ್ದ ಜಾಗದಲ್ಲಿ ನಂಗನಾಚ್ ನೃತ್ಯ ನಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ದೇವಿ ಜಾತ್ರೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಪಲಮನೇರ್ನಿಂದ ಯುವತಿಯರ ತಂಡ ಕರೆಸಿ ಸಾರ್ವಜನಿಕವಾಗಿ ಡ್ಯಾನ್ಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಜಾತ್ರೆ ಆಯೋಜಕ ರಾಜೇಂದ್ರ ಮತ್ತು ರಘು ಯುವತಿಯರೊಂದಿಗೆ ಡ್ಯಾನ್ಸ್ ಮಾಡಿದ್ದರು. ನರ್ತಕಿಯರ ಜತೆ ಕುಣಿದು ಕುಪ್ಪಳಿಸಿದ್ದ ಗ್ರಾಪಂ ಅಧ್ಯಕ್ಷ ರಘು ಮತ್ತು ಸದಸ್ಯ ರಾಜಣ್ಣ ವಿರುದ್ಧ ಕ್ಯಾಸಂಬಳ್ಳಿ ಠಾಣೆಯಲ್ಲಿ ಸಾಂಕ್ರಾಮಿಕ ಕಾಯಿಲೆ ಕಾಯ್ದೆಯಡಿ ದೂರು ದಾಖಲಾಗಿದೆ. ನೃತ್ಯ ಮಾಡುತ್ತಿದ್ದ ವೇದಿಕೆಯಲ್ಲಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಜಯಪ್ರಕಾಶ್ ಬುಜ್ಜಿನಾಯ್ಡು ಹಾಗೂ ಇತರ ಮುಖಂಡರು ಆಸೀನರಾಗಿದ್ದರು.