‘ಗೋವುಗಳ ಕರುಗಳ ಕಿವಿಯ ಮೂಲದಲ್ಲಿ ಬೆಳೆಯುವ ಕ್ರಿಮಿಗಳನ್ನು ತೆಗೆದುಹಾಕುವಲ್ಲಿ ನನಗೆ ಸದಾ ಗಮನವಿರುತ್ತಿತ್ತು. ಆಗಾಗ ನೆನಪಿಟ್ಟುಕೊಂಡು ಅದನ್ನು ಮಾಡುತ್ತಿದ್ದೆ. ಮನೆಯ ಕೈತೋಟದಲ್ಲಿ ಬೆಳೆಸುತ್ತಿದ್ದ ತರಕಾರಿಗಳಿಗೆ ನೀರು ಹಾಕಲು ಆಳು ಮಕ್ಕಳಿಗೆ ತ್ವರೆ ಮಾಡುತ್ತಿದ್ದೆ. ನದಿಯ ತಟದಲ್ಲಿ ನೀರಿಗೆ ತುಂಬಾ ಹತ್ತಿರದಲ್ಲಿ ಬೆಳೆಯುವ ದಟ್ಟ ಹಸಿರಿನ ಹುಲ್ಲನ್ನು ಕರುಗಳ ಮೇಲಿನ ಮಮಕಾರದಿಂದ ನಾನೇ ಕೊಯ್ದು ತಂದು ಆ ಹುಲ್ಲಿನಿಂದ ಕರುಗಳಿಗೆ ಮೇವನ್ನು ಕೊಟ್ಟು ಸಂತೃಪ್ತಿಪಡಿಸುತ್ತಿದ್ದೆ. ಆಗಾಗ ಮನೆಯ ಹೊಸ್ತಿಲಿಗೆ ರಂಗವಲ್ಲಿಯ ಲೇಪನವನ್ನು ಸಾಂಪ್ರದಾಯಿಕ ಬಿಳೆ ಬಣ್ಣದಿಂದ ಮಾಡುವುದು ನನ್ನ ರೂಢಿಯಾಗಿತ್ತು.’‘ನನ್ನ ಮನೆಯ ಆಳುಮಕ್ಕಳಿಗೆ ಆಗಾಗ ನೀತಿಯ ಪಾಠವನ್ನು ಹೇಳುತ್ತಿದ್ದೆ. ಅವರಲ್ಲಿ ವಿನಯ, ಆಚಾರ ಮುಂತಾದವುಗಳು ಆಚರಣೆಯಲ್ಲಿರಲಿ ಎಂಬುದು ನನ್ನ ಉದ್ದೇಶ. ಆದರೆ ಅದಕ್ಕಾಗಿ ಅವರಿಗೆ ಬೈಯುತ್ತಿರಲಿಲ್ಲ. ಸ್ವಲ್ಪ ದೈನ್ಯದಿಂದ ಕೂಡಿದ ಧ್ವನಿಯಿಂದ ‘ಇಂತಹ ಸದ್ಗೃಹಸ್ಥರ ಮನೆಯಲ್ಲಿ ಈ ರೀತಿಯ ಉದ್ಧಟತನದ ಕೆಲಸಗಾರರು ಇರುಬಹುದೆ? ಎಂಬುದಾಗಿ ಜನಗಳು ಹೇಳುವಂತಾಗದಿರಲಿ ಎಂದಷ್ಟೇ ಆಳುಮಕ್ಕಳಿಗೆ ಹೇಳುತ್ತಿದ್ದೆ. ನನ್ನ ನಡತೆಯಿಂದಲೂ ನೀತಿ-ನಿಯಮಗಳನ್ನು ಮೀರದೆ ವರ್ತಿಸುವುದನ್ನು ಅವರಿಗೆ ತೋರಿಸಿಕೊಡುತ್ತಿದ್ದೆ. ಸಮುದ್ರವು ತನ್ನ ಮರ್ಯಾದೆ (ಇತಿ-ಮಿತಿ) ಯನ್ನು ಮೀರದೇ ಇರುವುದಕ್ಕೋಸ್ಕರ ದಡದ ಗಡಿಯನ್ನು ಹಾಕಿಕೊಂಡಂತೆ ನಾನು ಇರುತ್ತಿದ್ದೆ. ಹೀಗೆ ನಿಯತ್ತಿನಿಂದ ವರ್ತಿಸುವಲ್ಲಿ ಯಾವಾಗಲೂ ಜಾಗರೂಕಳಾಗಿರುತ್ತಿದ್ದೆ.’
‘ಹೀಗೆ ದೀರ್ಘಕಾಲ ವಿಪ್ರನ ಗೃಹಿಣಿಯಾಗಿ ಬದುಕಿದ್ದ ನನಗೆ ಕೊನೆಗೆ ಮುಪ್ಪಿನ ಕಾಲ ಬಂದಿತು. ಮುಪ್ಪಿನ ತೀವ್ರತೆಯಿಂದ ಎಡಕಿವಿ ಕೇಳಿಸದಂತಾಯಿತು. ತನ್ನ ತಲೆ ಸದಾ ಕಂಪಿಸುತ್ತಿತ್ತು. (ನರಗಳ ದೌರ್ಬಲ್ಯದಿಂದ ನಡುಗುತ್ತಿತ್ತು.) ಶರೀರ ಬಗ್ಗಿಹೋಗಿತ್ತು. ಕೋಲನ್ನು ಹಿಡಿದುಕೊಂಡು ಅದನ್ನು ಅವಲಂಬಿಸಿಕೊಂಡು ನಡೆಯುತ್ತಿದ್ದೆ. ಇಂತಹ ನನ್ನ ಜೀವನ ಜೀರ್ಣವಾದ ಎಲೆಯಂತಹ ಕಳಾಹೀನ ಮೈಬಣ್ಣವಾಗಿಬಿಟ್ಟಿತ್ತು. ಎಡಕಿವಿ ಕೇಳಿಸದಿದ್ದುದರಿಂದ ಬಲಕಿವಿಯೊಂದರ ಮೂಲಕವೇ ಎಲ್ಲ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದೆ. ತಲೆ ಕಂಪಿಸುತ್ತಿದ್ದುದರಿಂದ ಕಿವಿಗಳು (ಕಿವಿಗಳ ಕೆಳಭಾಗಗಳು) ಜೋತಾಡುತ್ತಿದ್ದವು. ಯಾರಾದರೂ ಏನಾದರೂ ಹೇಳುತ್ತಿದ್ದಾರೆಂದು ಕಂಡರೆ ಅಂತಹ ಬಲಗಿವಿಯನ್ನೇ ಮುಂದೆ ಮಾಡಿಕೊಂಡು ಕೇಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ. ಶರೀರವು ಬಗ್ಗಿ ಹೋಗಿದ್ದರಿಂದ ಬಲಗೈಯಲ್ಲಿ ಹಿಡಿದ ಕೋಲು ಎತ್ತಿಕೊಂಡು ಹೋಗುವಾಗ ಆ ಬಲಕಿವಿಗೆ ಹತ್ತಿರ ಬಂದು ಬಲಕಿವಿಗೆ ಬಡಿದುಕೊಳ್ಳುತ್ತದೆಯೋ ಎಂಬಂತೆ ನೋಡುವವರಿಗೆ ಕಾಣುತ್ತಿತ್ತು. ಅಥವಾ ಆ ಕೋಲು ನನ್ನ ಶರೀರಕ್ಕೆ ಹತ್ತಿಕೊಂಡಿರುವ ಮುಪ್ಪನ್ನು ಹೊಡೆದೋಡಿಸಲು ಬಡಿದಂತೆ ಹತ್ತಿರ ಬರುತ್ತಿದ್ದು, ಅದರಿಂದ ಭಯಗೊಂಡ ಮುಪ್ಪುಳ್ಳ ಕೊನೆಯ ಹಂತದ ಜೀವನವೃತ್ತಿಯಿಂದ ವ್ಯಾಪಿಸಲ್ಪಟ್ಟವಳಂತೆ ಬದುಕಿದ್ದೆ.’
ಶ್ರೀ ವಸಿಷ್ಠರು ಮುಂದುವರಿದು ಹೇಳುತ್ತಿದ್ದಾರೆ - ‘ಶ್ರೀರಾಮ! ಹೀಗೆ ಹೇಳಿದ ನಂತರ ಅವಳು ಆ ಗಿರಿಗ್ರಾಮದ ಮೂಲೆಗಳಲ್ಲಿ ಸಂಚರಿ ಸುತ್ತಾ, ತನ್ನ ಜೊತೆ ಸಂಚರಿಸುತ್ತಿರುವ ಸರಸ್ವತೀದೇವಿಗೆ ಆಶ್ಚರ್ಯ ವಾಗುವ ಹಾಗೆ ತನ್ನ ಹಿಂದಿನ ಜನ್ಮದ ಪ್ರತ್ಯಕ್ಷ ಮಾಹಿತಿ ಗಳನ್ನು ಹೇಳತೊಡಗಿದಳು.’ ‘ಹೇ ದೇವಿ! ಇದೇ ನಾನು ಹಿಂದೆ ಓಡಾಡಿ ಕೊಂಡಿದ್ದ ಪಾಟಲೀ (ಪಾದರಿ) ಪುಷ್ಪದ ಮರಗಳ ಉದ್ಯಾನವನ. ಈಗಲೂ ಇಲ್ಲಿ ಹೂವು ತುಂಬಿದ ಮರಗಳು ದಟ್ಟವಾಗಿ ತುಂಬಿ ಕೊಂಡಿವೆ. ಈ ಕಡೆ ನಾನು ಓಡಾಡಿದ ಹೂವುಗಳಿಂದ ತುಂಬಿದ ಮತ್ತು ಮಂಟಪಗಳಿಂದ ಕೂಡಿದ ಅಶೋಕವೃಕ್ಷಗಳ ಉದ್ಯಾನ. ಇದೋ ನಾನು ಕರುಗಳನ್ನು ಕಟ್ಟುತ್ತಿದ್ದ ಮರವು ಪುಷ್ಕರಿಣಿಯ ತೀರದಲ್ಲಿದೆ. ಆಗ ನಾನು ಕರುಗಳು ಮೇಯಲೆಂದು ಸುಲಭವಾಗಿ ಓಡಾಡಲು ಅನುಕೂಲವಾಗುವಂತೆ ಕಟ್ಟಿಹಾಕುತ್ತಿದ್ದೆ. ಕರ್ಣಿಕಾ ಎಂಬ ಹೆಸರನ್ನು ನಾನು ಇಟ್ಟಿದ್ದ ಒಂದು ಕರು ಈಗಲೂ ಇಲ್ಲಿದೆ ನೋಡು. ಆದರೆ ಪಾಪ, ನಾನು ಇಲ್ಲದ್ದರಿಂದ ದುಃಖದಿಂದ ಹಸಿರು ಆಹಾರವನ್ನು ತಿನ್ನುವುದನ್ನೇ ಈ ಕರು ಬಿಟ್ಟುಬಿಟ್ಟಿದೆ, ಬಡಕಲಾಗಿದೆ.’
‘ಇಲ್ಲಿ ನೋಡು! ನನ್ನ ಮನೆಗೆ ನೀರು ತರುವ ಕೆಲಸಗಾರ್ತಿಯನ್ನು! ನನ್ನ ಮರಣದಿಂದ ದುಃಖಿತಳಾಗಿ ಕಣ್ಣೀರು ಸುರಿಸುತ್ತಾ ಅಳುತ್ತಿದ್ದಾಳೆ. ಮರಣವಾಗಿ ಎಂಟನೇ ದಿನ ಇಂದು. ಇಂದಿನವರೆಗೂ ಅಳುತ್ತಲೇ ಇದ್ದಾಳೆ. ಹಾಗಾಗಿಯೇ ಅವಳಿಗೆ ಕೆಲಸ ಮಾಡಲು ಸಾಧ್ಯವಾಗಿಲ್ಲ. ಮೊದಲೇ ಸ್ವಲ್ಪ ಮಂದಮತಿ. ಜೊತೆಗೆ ಈ ದುಃಖ. ಹಾಗಾಗಿ ಕೆಲಸ ಮಾಡಲಿಕ್ಕಾಗದೇ ಮೈಗೆ ಕೆಸರು ಲೇಪಿಸಿಕೊಂಡೇ ಅಳುತ್ತಿದ್ದಾಳೆ.’ ಇಲ್ಲಿ ಸ್ಪಷ್ಟವಾಗಿ ಲೀಲಾಮಹಾರಾಣಿಯ ಮಾತಿನಲ್ಲೇ ಉಲ್ಲೇಖಗೊಂಡಿದೆ. ಅವಳ ಹಿಂದಿನ ಜನ್ಮವಾದ ಅರುಂಧತಿ ಎಂಬ ಬ್ರಾಹ್ಮಣಿಯು ಮರಣ ಹೊಂದಿ ಏಳು ದಿನ ಮಾತ್ರ ಕಳೆದಿದೆ ಎಂಬುದಾಗಿ. ಇದರ ಬಗ್ಗೆ ವಿವರಣೆಯನ್ನು ಹಿಂದೆಯೇ ಕೊಡಲಾಗಿದೆ.