ಪ್ಲೋರಿಡಾ: ಕನ್ನಡದ ನೆಲದಲ್ಲೇ ಕನ್ನಡ ಶಾಲೆಗಳು ಅಸ್ತಿತ್ವಕ್ಕಾಗಿ ಹೆಣಗಾಡುತ್ತಿರುವಾಗ ಸಾಗರಾದಾಚೆಯ ದೇಶದಲ್ಲಿ ಕನ್ನಡ ಶಾಲೆಯೊಂದು ಉದಯವಾಗಿ ಅಚ್ಚರಿ ಮೂಡಿಸಿದೆ.
ಅಮೆರಿಕದಲ್ಲಿ ನೆಲೆಸಿರುವ ಕನ್ನಡ ಮಕ್ಕಳು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ರಾಯಭಾರಿಗಳಾಗಿರಬೇಕು ಎಂಬ ಉದ್ದೇಶದಿಂದ ದಕ್ಷಿಣ ಫ್ಲೋರಿಡಾದಲ್ಲಿ ಡಾ. ನಾಗರಾಜ್ ನಾಗತಿಹಳ್ಳಿಯವರ ನೇತೃತ್ವದಲ್ಲಿ ಮಾರ್ಚ್ 14, 2021 ರಂದು ನಂದಿ ಕನ್ನಡ ಶಾಲೆ ಪ್ರಾರಂಭವಾಗಿದೆ.
ಈ ಶಾಲೆಯು 6 ಶಿಕ್ಷಕರು, 42 ವಿದ್ಯಾರ್ಥಿಗಳು ಮತ್ತು 3 ನಿರ್ವಾಹಕರನ್ನ ಒಳಗೊಂಡಿದೆ. ಕನ್ನಡ ಅಕಾಡೆಮಿ ಸಹಯೋಗದಲ್ಲಿ ನಂದಿ ಕನ್ನಡ ಕೂಟದ ಜೊತೆಗೂಡಿ ಆರಂಭಿಸಿದ ನಂದಿ ಕನ್ನಡ ಶಾಲೆ ಉದ್ಘಾಟನೆ ಸಮಾರಂಭ ಮಾರ್ಚ್ 13 ರಂದು ವರ್ಚುಯಲ್ ಸಭೆ ಮೂಲಕ ನಡೆಯಿತು. ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ ದೇವೇಗೌಡರು ನಂದಿ ಕನ್ನಡ ಶಾಲೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲಾ ಮಕ್ಕಳು, ಪೋಷಕರು, ಕನ್ನಡ ಅಕಾಡೆಮಿ ಮತ್ತು ನಂದಿ ಕನ್ನಡ ಸಂಘದ ಬೆಂಬಲವನ್ನು ಅಭಿನಂದಿಸಿದರು, ಡಾ. ನಾಗರಾಜ್ ನಾಗತಿಹಳ್ಳಿಯವರ ಕನ್ನಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶೇಷ ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕರು ಹಾಗು ಲೇಖಕರಾದ ಡಾ. ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಹಾಸ್ಯ ಕಲಾವಿಧರಾದ ಪ್ರೂ. ಕೃಷ್ಣೇಗೌಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿನಂದನೆ ಸಲ್ಲಿಸಿದರು. ಅಮೆರಿಕದಲ್ಲಿ ನೆಲೆಸಿರುವ ಸಂಗೀತಗಾರರಾದ ಸುನಿತಾ ಅನಂತಸ್ವಾಮಿ ಅವರು "ಕನ್ನಡವೆಂದರೆ ಬರಿ ನುಡಿಯಲ್ಲ..." ಹಾಡನ್ನ ಹೇಳಿ ನಮ್ಮ ಈ ಕನ್ನಡ ಕಲಿಯುವಿಕೆಯ ಪ್ರಯತ್ನ ಯಶಸ್ವಿ ಆಗಲೆಂದು ಹಾರೈಸಿದರು. ಸರಿಗಮಪ ಸುಪ್ರೀಯ ಜೋಶಿ ಅವರು "ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ..." ಹಾಡನ್ನ ಹೇಳಿ ಕನ್ನಡದ ಎಲ್ಲ ಮಕ್ಕಳಿಗೆ ಇವರು ಅಭಿನಂದನೆಗಳನ್ನ ಸಲ್ಲಿಸಿದರು. ನಂದಿ ಕನ್ನಡ ಕೂಟದ ಅಧ್ಯಕ್ಷರಾದ ಮೈಥಿಲಿ ಮೂರ್ತಿ, ಡಾ. ಹಲ್ಲಗೆರೆ ಮೂರ್ತಿ, ರಮ ಸುರೇಶ್, ಮತ್ತು ಪ್ರೂ. ಮಹಾದೇವ್ ಭಟ್ ಅವರು ಭಾಷೆಯ ಸೌಂದರ್ಯ ಮತ್ತು ವಿದೇಶಿ ಭೂಮಿಯಲ್ಲಿ ಕನ್ನಡದ ತರ್ಕ, ಜಟಿಲತೆಗಳು ಮತ್ತು ವಿಕಾಸವನ್ನು ಹಂಚಿಕೊಂಡರು ಹಾಗು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.