ನ್ಯೂಸ್

ನಟ ಶಿವರಾಂ ಆರೋಗ್ಯ ಸ್ಥಿತಿ: ಇನ್ನು 24 ಗಂಟೆ ನೋಡಿ, ಒಂದು ತೀರ್ಮಾನಕ್ಕೆ ಬರುತ್ತೇವೆ ಎಂದ ವೈದ್ಯರು

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ(84) ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಕೋಮಾಗೆ ಸ್ಥಿತಿಗೆ ತಲುಪಿದ್ದಾರೆ. ಶಿವರಾಂರ ಕುಟುಂಬಸ್ಥರು ಮತ್ತು ಅಭಿಮಾನಿಗಳಲ್ಲಿ ಆತಂಕ ಮಡುಗಟ್ಟಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಕಲಾವಿದರು ಆಸ್ಪತ್ರೆಗೆ ಆಗಮಿಸಿ ಕುಟುಂಬಸ್ಥರಿಗೆ ಧೈರ್ಯ ಹೇಳುತ್ತಿದ್ದಾರೆ. ಬೇಗ ಗುಣಮುಖರಾಗಲೆಂದು ಪ್ರಾರ್ಥಿಸುತ್ತಿದ್ದಾರೆ.

ಇತ್ತೀಚಿಗೆ ಕಾರಿನಲ್ಲಿ ಶಿವರಾಂ ಹೊರಗೆ ಹೋಗಿದ್ದರು. ಆ ವೇಳೆ ಅಪಘಾತ ಸಂಭವಿಸಿ ತಲೆಗೆ ಸ್ವಲ್ಪ ಪೆಟ್ಟಾಗಿತ್ತು. ಆಗ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದು ಟೆಸ್ಟ್ ಮಾಡಿಸಿದ್ದರು. ಎಲ್ಲವೂ ನಾರ್ಮಲ್ ಅಂತ ಬಂದಿತ್ತು. ಮಂಗಳವಾರ(ನ.30) ರಾತ್ರಿ ಮನೆಯಲ್ಲಿ ಅಯ್ಯಪ್ಪ ಸ್ವಾಮಿಯ ಪೂಜೆ ಇತ್ತು. ಪೂಜೆ ಮಾಡಲು ರೂಂಗೆ ಹೋಗಿದ್ದ ವೇಳೆ ಶಿವರಾಂ ಕೆಳಗೆ ಬಿದ್ದು, ತಲೆಗೆ ಮತ್ತೆ ಬಲವಾದ ಪೆಟ್ಟಾಗಿತ್ತು. ಅಂದು ರಾತ್ರಿಯೇ ಅವರನ್ನು ಆಸ್ಪತ್ರೆಗೆ ಕುಟುಂಬಸ್ಥರು ಕರೆದೊಯ್ದರು. ಮಿದುಳಿನಲ್ಲಿ ರಕ್ತಸ್ರಾವ ಆಗಿ, ಈಗ ಕೋಮಾ ಸ್ಥಿತಿಗೆ ತಲುಪಿದ್ದಾರೆ. ವಿದ್ಯಾಪೀಠ ಸರ್ಕಲ್ ಬಳಿಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲೇ ಚಿಕಿತ್ಸೆ ಮುಂದುವರಿದಿದೆ.

''ತಲೆಗೆ ಆಗಿರುವ ಪೆಟ್ಟಿನಿಂದಾಗಿ ನಟ ಶಿವರಾಂ ಅವರ ಆರೋಗ್ಯ ಚೇತರಿಕೆಯೂ ಆಗಿಲ್ಲ, ಕುಂದಿಯೂ ಇಲ್ಲ. ನಿನ್ನೆ ಹೇಗಿತ್ತೋ ಹಾಗೇ ಇದೆ. ಇನ್ನು 24 ಗಂಟೆಗಳ ಕಾಲ ಅವರ ಆರೋಗ್ಯ ಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಿದ್ದೇವೆ'' ಎಂದು ಅವರನ್ನು ನೋಡಿಕೊಳ್ಳುತ್ತಿರುವ ಪ್ರಶಾಂತ್ ಆಸ್ಪತ್ರೆಯ ಡಾ. ಮನೋಜ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.