ನ್ಯೂಸ್

ದೀಪಾವಳಿ ದಿನವೇ ಘೋರ ದುರಂತ: ಹೊಸ ಮನೆ ಕಟ್ಟಬೇಕಿದ್ದ ಜಾಗದಲ್ಲೇ ಪ್ರಾಣಬಿಟ್ಟ ಮೂವರು ಬಾಲಕರು

ಕಲಬುರಗಿ: ನಗರದ ಮಹಾಲಕ್ಷ್ಮೀ ಲೇಔಟ್​ ನಿವೇಶನದಲ್ಲಿ ಮನೆ ನಿರ್ಮಾಣಕ್ಕೆಂದು ಸಜ್ಜಾದ ಶಿವಶರಣ ಎಂಬುವರು ಪಿಲ್ಲರ್​ ಹಾಕಲು ಮಂಗಳವಾರ ಗುಂಡಿ ತೋಡಿಸಿದ್ದರು. ಮರುದಿನ ಅದೇ ಗುಂಡಿ ಮೂವರು ಬಾಲಕರ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ.

ಲಾಲ್​ಗೇರಿ ಪ್ರದೇಶದ ನಿವಾಸಿಗಳಾದ ಸಹೋದರ ಸಂಬಂಧಿ ಪ್ರಶಾಂತ ಅಂಬಣ್ಣ(12), ವಿಘ್ನೇಶ ರಾಜು(12), ದರ್ಶನ ನಾಗರಾಜ(10) ಮೃತರು.

ಏನಿದು ಘಟನೆ?: ಶಿವಶರಣ ಎಂಬುವರು ತನ್ನ ನಿವೇಶನದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದ. ಆಯ ಪೂಜೆ ಬಳಿಕ ಪಿಲ್ಲರ್​ ನಿರ್ಮಾಣಕ್ಕೆಂದು ಮಂಗಳವಾರ ಗುಂಡಿ ತೋಡಿಸಿದ್ದರು. ರಾತ್ರಿ ಭಾರಿ ಮಳೆಯಾಗಿದ್ದರಿಂದ ಸುತ್ತಲಿನ ಪ್ರದೇಶದ ನೀರು ಹರಿದು ಇದರಲ್ಲಿ ಸಂಗ್ರಹಗೊಂಡಿತ್ತು. ಬುಧವಾರ ಮಧ್ಯಾಹ್ನ ನೀರು ನಿಂತಿದ್ದನ್ನು ನೋಡಿದ ಬಾಲಕರು ಈಜಾಡಲು ಬಂದಿದ್ದರು. ಅಲ್ಲಿದ್ದ ಕಾವಲುಗಾರ ಆ ಮಕ್ಕಳನ್ನು ಬೆದರಿಸಿ ಕಳುಹಿಸಿದ್ದ.

ಅತ್ತ ಕೆಲಸ ಆರಂಭಿಸಲು ಸೈಟ್​ನಲ್ಲಿ ನಿಂತಿದ್ದ ಮಳೆ ನೀರನ್ನು ಹೊರಹಾಕಲು ನೀರೆತ್ತುವ ಯಂತ್ರ ಚಾಲೂ ಮಾಡಿ, ಕಾವಲುಗಾರ ಚಹಾ ಕುಡಿಯಲು ಹೋಗಿದ್ದ. ಈ ವೇಳೆ ಬಾಲಕರು ಮತ್ತೆ ಅಲ್ಲಿಗೆ ಬಂದು ನೀರಿಗಿಳಿದಿದ್ದಾರೆ. ಸರಿಯಾಗಿ ಈಜು ಬಾರದ ಕಾರಣ ಮುಳುಗಿದ್ದಾರೆ.

ಮಕ್ಕಳು ನೀರಿನಲ್ಲಿ ಮುಳುಗುತ್ತಿರುವುದನ್ನು ನೋಡಿದ ಕೆಲವರು ರಕ್ಷಣೆ ಮಾಡಲು ಪ್ರಯತ್ನಿಸಿದ್ದಲ್ಲದೆ ಪೊಲೀಸರಿಗೂ ವಿಷಯ ತಿಳಿಸಿದ್ದಾರೆ. ನೀರಿನಿಂದ ಮೇಲೆ ತೆಗೆದು ಆಸ್ಪತ್ರೆಗೆ ಸಾಗಿಸಿದರೂ ಫಲಿಸಲಿಲ್ಲ. ಕರುಳ ಕುಡಿಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ದೀಪಾವಳಿ ಆಚರಣೆ ಸಿದ್ಧತೆಯಲ್ಲಿದ್ದ ಕುಟುಂಬಗಳಿಗೆ ಮಕ್ಕಳ ಸಾವು ಬರಸಿಡಿಲಿನಂತೆ ಬಂದೆರಗಿದೆ. ಸಂಭ್ರಮ ಇರಬೇಕಿದ್ದ ಮನಗಳಲ್ಲಿ ನೋವು ಆವರಿಸಿದೆ.

ಡಿಸಿಪಿ ಅಡ್ಡೂರು ಶ್ರೀನಿವಾಸುಲು, ಎಸಿಪಿ ಅಂಶುಕುಮಾರ್​, ಇನ್​ಸ್ಪೆಕ್ಟರ್​ ಅರುಣಕುಮಾರ ಮುರುಗೊಂಡಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಮ್ಸ್​ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.