ನ್ಯೂಸ್

ಕರೊನಾ ನಿಯಂತ್ರಣಕ್ಕೆ ಬಂತು ಸಿಂಗಲ್ ಡೋಸ್: ಜಾನ್ಸನ್ & ಜಾನ್ಸನ್ ಲಸಿಕೆಯ ತುರ್ತು ಬಳಕೆಗೆ ಅಸ್ತು ಎಂದ ಭಾರತ

ದೆಹಲಿ: ಮಹಾಮಾರಿ ಕರೊನಾ ಸೋಂಕನ್ನು ಕಟ್ಟಿಹಾಕಲು ದೇಶಕ್ಕೆ ಮತ್ತೊಂದು ಸಿಂಗಲ್​ ಡೋಸ್​ ಬಂದಿದೆ. ಸದ್ಯ ಭಾರತದಲ್ಲಿ ಕೋವ್ಯಾಕ್ಸಿನ್​, ಕೋವಿಶೀಲ್ಡ್​, ಸ್ಫುಟ್ನಿಕ್​ ವಿ, ಮೊಡೆರ್ನಾ ಲಸಿಕೆಯನ್ನು ಬಳಸಲಾಗುತ್ತಿದೆ. ಇದೀಗ ಅಮೆರಿಕ ಮೂಲದ 'ಜಾನ್ಸನ್ ಆ್ಯಂಡ್​ ಜಾನ್ಸನ್' ಕಂಪನಿಯ ಸಿಂಗಲ್ ಡೋಸ್ ಲಸಿಕೆ ಬಳಸಲು ಕೇಂದ್ರ ಸರ್ಕಾರ ಅಸ್ತು ಎಂದಿದೆ. ಆ ಮೂಲಕ ದೇಶದಲ್ಲಿ ಒಟ್ಟು 5 ಲಸಿಕೆಗಳ ಬಳಕೆಗೆ ಕೇಂದ್ರದಿಂದ ಗ್ರೀನ್​ ಸಿಗ್ನಲ್​ ಸಿಕ್ಕಂತಾಗಿದೆ.

ಈ ಬಗ್ಗೆ ಶನಿವಾರ ಕೇಂದ್ರದ ಆರೋಗ್ಯ ಸಚಿವ ಮನ್​ಸುಖ್​ ಮಾಂಡವೀಯ ಅವರು ಶನಿವಾರ ಅಧಿಕೃತ ಘೋಷಣೆ ಮಾಡಿದ್ದಾರೆ. 'ಭಾರತದಲ್ಲಿ ಜಾನ್ಸನ್ & ಜಾನ್ಸನ್ ಕಂಪನಿಯ ಏಕ ಡೋಸ್​ ಲಸಿಕೆಯನ್ನು ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ. ಪ್ರಸ್ತುತ ದೇಶದಲ್ಲಿ ಒಟ್ಟು 5 ಕರೊನಾ ಲಸಿಕೆ ಬಳಕೆಗೆ ಅನುಮೋದನೆ ಸಿಕ್ಕಿದೆ. 3ನೇ ಅಲೆಯಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕರೊನಾ ಮಣಿಸುವ ಹೋರಾಟಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ' ಎಂದು ಟ್ವೀಟ್​ ಮೂಲಕ ಸಚಿವರು ತಿಳಿಸಿದ್ದಾರೆ.

ಜಾನ್ಸನ್ ಆ್ಯಂಡ್​ ಜಾನ್ಸನ್ ಕಂಪನಿಯು ಸಿಂಗಲ್​ ಡೋಸ್​ ಬಳಕೆಗೆ ಅನುಮತಿ ಕೊಡುವಂತೆ ಶುಕ್ರವಾರ ಪ್ರಸ್ತಾವನೆ ಕಳಿಸಿತ್ತು. ಅದೇ ದಿನ ಭಾರತೀಯ ನಿಯಂತ್ರನ ಪ್ರಾಧಿಕಾರವು(ಡಿಸಿಜಿಐ) ಪ್ರಸ್ತಾವನೆಗೆ ಅಸ್ತು ಎಂದಿದೆ.