ನ್ಯೂಸ್

ಎಂಎಲ್​ಸಿ ಮನೋಹರ್​ ರಾಜೀನಾಮೆ: ಜೆಡಿಎಸ್​ ತೊರೆದು ಕಾಂಗ್ರೆಸ್​ನತ್ತ ಮುಖ ಮಾಡಿದ ಎಚ್​ಡಿಕೆ ಆಪ್ತ

arunakunigal

ಬೆಂಗಳೂರು: ವಿಧಾನ ಪರಿಷತ್​ನ ಜೆಡಿಎಸ್​ ಸದಸ್ಯ ಸಿ.ಆರ್​.ಮನೋಹರ್​ ಸದಸ್ಯತ್ವಕ್ಕೆ ರಾಜೀನಾಮೆ ಕೊಡುವ ಮೂಲಕ ಜೆಡಿಎಸ್​ಗೆ ಗುಡ್​ಬೈ ಹೇಳಿದ್ದಾರೆ.

ಸೋಮವಾರ ರಾತ್ರಿ ವಿಧಾನಪರಿಷತ್​ನ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನೋಹರ್​ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣ ಮತ್ತು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ಮನೋಹರ್​ ಹೇಳಿದ್ದಾರೆ. ರಾಜೀನಾಮೆ ಪತ್ರವನ್ನು ಅಂಗೀಕರಿಸಿರುವ ಸಭಾಪತಿಗಳು ಮುಂದಿನ ಕ್ರಮಕ್ಕಾಗಿ ಕಾರ್ಯದರ್ಶಿಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ.

ಚಿತ್ರ ನಿರ್ಮಾಪಕರೂ ಆಗಿರುವ ಮನೋಹರ್​, ಎಚ್​.ಡಿ.ಕುಮಾರಸ್ವಾಮಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಕಳೆದ ಚುನಾವಣೆಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಜೆಡಿಎಸ್ ಎಂಎಲ್​ಸಿ ಆಗಿ ಮನೋಹರ್​ ಆಯ್ಕೆಯಾಗಿದ್ದರು. ಬಳಿಕ ಸಿ.ಆರ್​. ಮನೋಹರ್​ ಜೆಡಿಎಸ್​ ವರಿಷ್ಠರ ಜತೆ ಮುನಿಸಿಕೊಂಡಿದ್ದು, ಬಿಜೆಪಿ ಕಡೆ ಒಲವು ತೋರಿದ್ದರು. ಬೆಜೆಪಿ ಸೇರಲು ಯೋಚಿಸಿದ್ದ ಮನೋಹರ್​ಗೆ, ವಿಧಾನ ಪರಿಷತ್​ ಚುನಾವಣೆಗೆ ಬಿಜೆಪಿಯ ಟಿಕೆಟ್​ ಸಿಕ್ಕಿರಲಿಲ್ಲ. ಇದೀಗ ಅಸೆಂಬ್ಲಿ ಪ್ರವೇಶಿಸಲು ಕಣ್ಣಿಟ್ಟಿರುವ ಮನೋಹರ್​, ಕಾಂಗ್ರೆಸ್​ನತ್ತ ಮುಖ ಮಾಡಿದ್ದಾರೆ. ಡಿಸೆಂಬರ್​ 2 ರಂದು ಕಾಂಗ್ರೆಸ್​ ಸೇರುವ ಸಾಧ್ಯತೆಗಳಿವೆ ಎನ್ನಲಾಗಿದೆ.