ಹಾಸನ: ಕುರುಕ್ಷೇತ್ರ ನಾಟಕ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಭೀಮನ ಪಾತ್ರಕ್ಕೆ ಜೀವ ತುಂಬಿದ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡರು ಕೈಯಲ್ಲಿ ಗದೆ ಹಿಡಿದು ಕೌರವರ ಸಂಹಾರ ಪ್ರತಿಜ್ಞೆ ಮಾಡುವ ಸನ್ನಿವೇಶದ ಡೈಲಾಗ್ ಹಾಗೂ ಹಾಡು ಸಭಿಕರಿಂದ ಭಾರೀ ಸಿಳ್ಳೆ-ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಈ ದೃಶ್ಯ ಸಖತ್ ವೈರಲ್ ಆಗಿದೆ.
ಅರಸೀಕೆರೆ ತಾಲೂಕಿನ ಪಡುವನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ಗುರುವಾರ ರಾತ್ರಿ ಕುರುಕ್ಷೇತ್ರ ನಾಟಕ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಲು ಆಗಮಿಸಿದ್ದ ಶಾಸಕರು, ಭೀಮನ ಪಾತ್ರ ಖಡಕ್ ಡೈಲಾಗ್ ಹೇಳಿ ಗಮನ ಸೆಳೆದರು. ಈ ಹಿಂದೆ ನಾನೂ ಪೌರಾಣಿಕ ನಾಟಕದಲ್ಲಿ ಭೀಮನ ಪಾತ್ರ ಮಾಡುತ್ತಿದ್ದೆ ಎಂದು ಹಳೆಯ ನೆನಪು ಮೆಲುಕು ಹಾಕಿದ ಶಾಸಕರು, ಅಭಿನಯಿಸಿದರು. ಸದನದಲ್ಲಿ ಸ್ವಾರಸ್ಯಕರ ಮಾತಿನಿಂದಲೇ ಗಮನ ಸೆಳೆಯುವ ಶಿವಲಿಂಗೇಗೌಡರು, ನಿನ್ನೆ ರಾತ್ರಿ ಪೌರಾಣಿಕ ನಾಟಕದ ಅಭಿನಯಿಸಿ ಮೆಚ್ಚುಗೆ ಗಳಿಸಿದರು.