ನ್ಯೂಸ್

ಇದು ಮಾತ್ರೆಯಲ್ಲ, ಮದುವೆ ಆಮಂತ್ರಣ ಪತ್ರಿಕೆ! ಸಖತ್​ ವೈರಲ್​ ಆಗ್ತಿದೆ ಫಾರ್ಮಾಸಿಸ್ಟ್- ನರ್ಸ್​ ಜೋಡಿಯ ವೆಡ್ಡಿಂಗ್​ ಕಾರ್ಡ್​

ಬೆಂಗಳೂರು: ಮದ್ವೆ ಅನ್ನೋದು ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ತರ ಘಟ್ಟ. ನೂರಾರು ಕನಸಿನ ಬುತ್ತಿಯೊಂದಿಗೆ ವಧು-ವರರು ದಾಂಪತ್ಯಕ್ಕೆ ಕಾಲಿಡುತ್ತಾರೆ. ಅದಕ್ಕೂ ಮುನ್ನ ಮದ್ವೆ ಹೀಗೆ ನಡೆಯಬೇಕು, ಅಲಂಕಾರ, ಬಟ್ಟೆ, ಊಟ, ಆಭರಣ, ಫೋಟೋ... ಎಲ್ಲದರ ಬಗ್ಗೆಯೂ ವಿಶೇಷ ಕಾಳಜಿಯಿಂದ ಹೊಸತನಕ್ಕೆ ಆದ್ಯತೆ ನೀಡುತ್ತಾ ಆಯ್ಕೆ ಮಾಡುತ್ತಾರೆ. ಇನ್ನು ಆಮಂತ್ರಣ ಪತ್ರಿಕೆ ವಿನ್ಯಾಸಕ್ಕೂ ಹೆಚ್ಚು ಮಹತ್ವ ಇದ್ದದ್ದೇ. ಇತ್ತೀಚೆಗೆ ಮದುವೆಯ ಆಮಂತ್ರಣ ಪತ್ರಿಕೆಗಳದ್ದೇ ಭಾರಿ ಸದ್ದು. ಪಾಸ್‌ಪೋರ್ಟ್, ರೇಷನ್ ಕಾರ್ಡ್, ಆಧಾರ್​ ಕಾರ್ಡ್​, ದಿನಪತ್ರಿಕೆ, ಟಿವಿ ಜಾಹೀರಾತು, ಪರಿಸರ ಕಾಳಜಿ, ಮೊಬೈಲ್​ ಅಪ್ಲಿಕೇಷನ್​ ಮಾದರಿ, ಲ್ಯಾಪ್​ಟಾಪ್​ ಮದರಿಯ ಕಾರ್ಡ್​... ಹೀಗೆ ತರೇಹವಾರಿ ರೀತಿಯ ಆಮಂತ್ರಣ ಪತ್ರಿಕೆಗಳು ಚಾಲ್ತಿಯಲ್ಲಿವೆ. ಇದೀಗ ತಮಿಳನಾಡಿನಲ್ಲಿ ಟ್ಯಾಬ್ಲೆಟ್(ಮಾತ್ರೆ) ಕಾರ್ಡ್ ಮಾದರಿಯ ಆಮಂತ್ರಣ ಪತ್ರಿಕೆ ವೈರಲ್​ ಆಗಿದೆ.

ಇಂತಹದ್ದೊಂದು ವಿಭಿನ್ನ ಆಮಂತ್ರಣ ಪತ್ರಿಕೆ ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ಮುದ್ರಣವಾಗಿದೆ. ವರ ಫಾರ್ಮಾಸಿಸ್ಟ್, ವಧು ನರ್ಸ್​ ಆಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಈ ಜೋಡಿ ಆಹ್ವಾನ ಪತ್ರಿಕೆಗೆ ಟ್ಯಾಬ್ಲೆಟ್ ಕಾರ್ಡ್ ಮಾದರಿ ಬಳಸಿದ್ದಾರೆ. ಆ ಮೂಲಕ ವೃತ್ತಿಪರತೆ ತೋರಿದ್ದಾರೆ. ಅಂದಹಾಗೆ ಈ ಮಾತ್ರೆ ಕಾರ್ಡ್​ನಲ್ಲಿ ಏನಿದೆ ಗೊತ್ತಾ?

ವರನ ಹೆಸರು ಎಜಿಲರಸನ್. ವಧುವಿ ಹೆಸರು ವಸಂತಕುಮಾರಿ. ತಿರುವಣ್ಣಾಮಲೈ ಜಿಲ್ಲೆಯ ಎಜಿಲರಸನ್​ ಮತ್ತು ವಿಲ್ಲುಪುರಂ ಜಿಲ್ಲೆಯ ಗೆಂಜಿಯ ವಸಂತಕುಮಾರಿ ಅವರ ಮದುವೆ 2022ರ ಸೆಪ್ಟೆಂಬರ್ 5ರಂದು ನಡೆಯಲಿದೆ. ಎಲ್ಲ ಸ್ನೇಹಿತರು ಮತ್ತು ಬಂಧುಗಳು ತಪ್ಪದೇ ವಿವಾಹ ಸಮಾರಂಭಕ್ಕೆ ಆಗಮಿಸಬೇಕು ಎಂದು ತಿಳಿಸಲಾಗಿದೆ. ಅಷ್ಟೇ ಅಲ್ಲ, ನೀಲಿ ಬಣ್ಣದಲ್ಲಿ ಮದುವೆ ಮತ್ತು ಆರತಕ್ಷತೆ ನಡೆಯುವ ದಿನಾಂಕ ಮತ್ತು ಸಮಯ ತಿಳಿಸಲಾಗಿದೆ. ಮ್ಯಾನುಫ್ಯಾಕ್ಚರ್​​ ವಿಭಾಗದಲ್ಲಿ ವರನ ತಂದೆ-ತಾಯಿ, ವಧುವಿನ ತಂದೆ-ತಾಯಿ ಹೆಸರಿನೊಂದಿಗೆ ಅವರ ವಿಳಾಸ ಇದೆ.

ಟ್ಯಾಬ್ಲೆಟ್ ಕಾರ್ಡ್‌​ಗಳಲ್ಲಿ ಸೂಚಿಸುವ ವಾರ್ನಿಂಗ್​ ಸ್ಥಳದಲ್ಲಿ 'ಎಲ್ಲ ಸ್ನೇಹಿತರೇ, ಬಂಧುಗಳೇ ನಮ್ಮ ಮದುವೆಯ ಶುಭಕಾರ್ಯಕ್ರಮಕ್ಕೆ ಮಿಸ್​ ಮಾಡದೆ ಬನ್ನಿ' ಎಂದು ಕೆಂಪು ಬಣ್ಣದಲ್ಲಿ ಮುದ್ರಿಸಲಾಗಿದೆ. ಇನ್ನು ತಮ್ಮ ಮದ್ವೆ ದಿನದ ವಿಶೇಷ ದಿನಗಳನ್ನೂ ಸ್ಮರಿಸಿದ್ದಾರೆ. ಅಂದು ಶಿಕ್ಷಕರ ದಿನ ಮತ್ತು ಮದರ್​ ತೆರೇಸಾ ಸ್ಮರಣೆ ದಿನವಿದೆ. ಮದ್ವೆ ಕರೆಯೋಲೆ ಪತ್ರಿಕೆಯಲ್ಲಿ ವಧು-ವರನ ಹೆಸರು ದೊಡ್ಡ ಅಕ್ಷರದಲ್ಲಿದ್ದು, ಪಕ್ಕದಲ್ಲೇ ಇಬ್ಬರ ಶಿಕ್ಷಣದ ವಿವರವೂ ಇದೆ.

ಮಾತ್ರೆ ಶೀಟ್​ ಮಾದರಿಯ ಈ ಮದ್ವೆ ಕಾರ್ಡ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಗೆ ಶುಭ ಕೋರುತ್ತಿದ್ದಾರೆ.