ಬೆಂಗಳೂರು: ಸಹೋದ್ಯೋಗಿ ಯುವತಿ ಜತೆ ಕಾರಿನಲ್ಲೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ನನ್ನ ಗಂಡ ರೆಡ್ಹ್ಯಾಂಡ್ ಆಗಿ ನನ್ನ ಕೈಗೆ ಸಿಕ್ಕಿಬಿದ್ದಾನೆ ಎಂದು ಆತನ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಇತ್ತೀಚಿಗೆ ನಗರದಲ್ಲಿ ಸಂಭವಿಸಿದೆ.
ಮದುವೆಯಾದ ಆರಂಭದಲ್ಲಿ ಪತಿ ನನ್ನ ಜತೆಗೆ ಆತ್ಮೀಯವಾಗಿದ್ದರು. ಆದರೆ, ಇತ್ತೀಚೆಗೆ ಅಂತರ ಕಾಪಾಡುತ್ತಿದ್ದರು. ಇವರ ನಡೆಯಿಂದ ಅನುಮಾನ ಬಂದಿತ್ತು. ಸ್ನೇಹಿತರನ್ನು ವಿಚಾರಿಸಿದಾಗ ಅವರು ಕೆಲಸ ಮಾಡುತ್ತಿದ್ದ ಕಂಪನಿಯ ಸಹೋದ್ಯೋಗಿ ಜತೆ ಸಲುಗೆ ಬೆಳೆಸಿರುವುದು ಗೊತ್ತಾಗಿತ್ತು. ಡಿ.6ರಂದು ರಾತ್ರಿ ಪತಿಯ ಗಮನಕ್ಕೆ ಬಾರದಂತೆ ಅವರನ್ನು ಹಿಂಬಾಲಿಸಿಕೊಂಡು ಹೋಗಿದ್ದೆ. ಆ ವೇಳೆ ನನ್ನ ಗಂಡ ಹಲಸೂರಿನ ಹೋಟೆಲ್ನಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿರುವುದು ಕಂಡು ಬಂದಿತ್ತು. ಹೋಟೆಲ್ಗೆ ಗ್ರಾಹಕರ ಸೋಗಿನಲ್ಲಿ ತೆರಳಿ ಪತಿಯ ಚಲನವಲನಗಳನ್ನು ಗಮನಿಸುತ್ತಿದ್ದೆ.
ಪಾರ್ಟಿ ಮುಗಿದ ಬಳಿಕ ಸ್ನೇಹಿತರನ್ನು ಕಬ್ಬನ್ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಬಿಟ್ಟ ನನ್ನ ಗಂಡ, ಬಳಿಕ ಸಹೋದ್ಯೋಗಿ ಯುವತಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಮುಂದೆ ಸಾಗಿದ. ರಾಜಭವನ ರಸ್ತೆಯತ್ತ ಹೊರಟು ಮಾರ್ಗಮಧ್ಯೆ ಕಾರು ನಿಲ್ಲಿಸಿ ಯುವತಿ ಜತೆಗೆ ಲೈಂಗಿಕ ಕ್ರಿಯೆ ನಡೆಸಲು ಆರಂಭಿಸಿದ. ಅದನ್ನು ನೋಡಿ ಆಕ್ರೋಶಗೊಂಡು ಈ ಬಗ್ಗೆ ಪ್ರಶ್ನಿಸಿದೆ ಎಂದು ಪತ್ನಿ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ. ಈ ವಿಚಾರವಾಗಿ ಪತಿ-ಪತ್ನಿ ಹಾಗೂ ಪತಿಯ ಸಹೋದ್ಯೋಗಿ ಯುವತಿ ನಡುವೆ ಜಗಳ ನಡೆದಿತ್ತು.
ಸಹೋದ್ಯೋಗಿ ಯುವತಿ ಜತೆ ಕಾರಿನಲ್ಲೇ ಸಿಕ್ಕಿಬಿದ್ದ ಪತಿಯ ವಿರುದ್ಧ ಪತ್ನಿ ದೂರು ಕೊಟ್ಟರೆ, ಪತ್ನಿ ವಿರುದ್ಧ ಪತಿಯ ಪ್ರೇಯಸಿ ದೂರು ದಾಖಲಿಸಿದ್ದಾಳೆ. ಗಂಡ, ಹೆಂಡತಿ, ಅವಳು ಈ ಮೂವರನ್ನೂ ಪೊಲೀಸರು ಠಾಣೆಗೆ ಕರೆಸಿ ಹೇಳಿಕೆ ಪಡೆದು ಬಿಟ್ಟು ಕಳುಹಿಸಿದ್ದಾರೆ.