ಬೆಂಗಳೂರು: ಮೇಕೆದಾಟು ಪಾದಯಾತ್ರೆ ಕರೊನಾ ಯಾತ್ರೆ ಆಗುವುದು ಬೇಡ, ದಯವಿಟ್ಟು ನಿಮ್ಮ ರಾಜಕೀಯ ಉದ್ದೇಶದ ನಡಿಗೆ ಕಾರ್ಯಕ್ರಮವನ್ನು ಕೈಬಿಡಿ ಮನವಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತೊಮ್ಮೆ ಮನವಿ ಮಾಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಇವರು ಪಾದಯಾತ್ರೆ ಆರಂಭಿಸಿದಾಗ ಸಾರ್ವಜನಿಕರ ಆರೋಗ್ಯದ ಮೇಲೆ ಬೀರಬಹುದಾದ ಅಡ್ಡ ಪರಿಣಾಮದ ಬಗ್ಗೆ ನಮಗೆ ಆತಂಕ ಇತ್ತು. ಆ ಕಾರಣದಿಂದ ನಾವು ಕಾರ್ಯಕ್ರಮವನ್ನು ಮುಂದಕ್ಕೆ ಹಾಕಿಕೊಳ್ಳಿ ಎಂದು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದೆವು. ಆದರೆ ಅವರು ನಮ್ಮ ಮಾತು ಕೇಳಲೇ ಇಲ್ಲ. ಈಗ ನಮ್ಮ ಆತಂಕ ನಿಜವಾಗುತ್ತಿದೆ. ಕರೋನಾ ಬಗ್ಗೆ ಕಾಂಗ್ರೆಸ್ ನಾಯಕರು ಅಪ ಪ್ರಚಾರ ಮಾಡುತ್ತಿರುವುದಲ್ಲದೆ ವಿತ್ತಂಡವಾದ ಮಂಡಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕೆಲವು ನಾಯಕರಿಗೆ ಈಗಾಗಲೇ ಕರೊನಾ ಸೋಂಕು ತಗುಲಿದ್ದು, ಆಸ್ಪತ್ರೆ ಸೇರಿದ್ದಾರೆ. ಆ ಕಾರಣದಿಂದ ಮತ್ತೊಮ್ಮೆ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡುತ್ತೇನೆ. ಸಾರ್ವಜನಿಕರ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ಪಾದಯಾತ್ರೆ ಕಾರ್ಯಕ್ರಮವನ್ನು ಕೈಬಿಡಿ ಎಂದು ಗೃಹ ಸಚಿವರು ಮತ್ತೊಮ್ಮೆ ಕೋರಿದರು.
ಕರೊನಾ ಅಪಾಯಕಾರಿ ರೀತಿಯಲ್ಲಿ ಹರಡುತ್ತಿದೆ. ಸಮಾಜದ ಎಲ್ಲ ಜನರೂ ವಿಶೇಷವಾಗಿ ಎಲ್ಲ ಕ್ಷೇತ್ರದ ಶ್ರಮಿಕ ವರ್ಗದವರೂ ಆತಂಕಗೊಂಡಿದ್ದಾರೆ. ಈಗಾಗಲೇ ನೀವು ಜನತೆಯ ಆಕ್ರೋಶಕ್ಕೆ ಗುರಿಯಾಗಿದ್ದು, ಅವರ ಕ್ಷಮೆ ಕೇಳಿ ಪಾದಯಾತ್ರೆ ನಿಲ್ಲಿಸಿ ಎಂದರು.