ನ್ಯೂಸ್

ಶಾಲಾ ಸಮವಸ್ತ್ರ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ: ಡಿಕೆಶಿ ವಿರುದ್ಧ ಗೃಹ ಸಚಿವ ಆಕ್ರೋಶ

ಬೆಂಗಳೂರು: ಶಾಲಾ ಸಮವಸ್ತ್ರ ಧರಿಸುವ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಜನರೇ ಆ ಪಕ್ಷವನ್ನು ಅರಬ್ಬಿಸಮುದ್ರಕ್ಕೆ ಎಸೆಯುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವಿದ್ಯಾರ್ಥಿಗಳು ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ಇಳಿಸಿ, ಕೇಸರಿ ಧ್ವಜ ಏರಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರು ಸುಳ್ಳು ಮಾಹಿತಿ ನೀಡಿದ್ದಾರೆ. ಕಾಲೇಜು ಆವಣದಲ್ಲಿ ರಾಷ್ಟ್ರಧ್ವಜ ಹಾರುತ್ತಿರಲಿಲ್ಲ. ಡಿ.ಕೆ. ಶಿವಕುಮಾರ್ ಬೇಜವಾಬ್ದಾರಿಯಾಗಿ ಮಾತನಾಡಿದ್ದಾರೆ. ಬೆಂಕಿಗೆ ತುಪ್ಪ ಸುರಿಸುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.

ಇಂಥಹ ಬೇಜವಾಬ್ದಾರಿ ಹಾಗೂ ಹಸಿಸುಳ್ಳು ಹೇಳಿಕೆ ಒಬ್ಬ ಹಿರಿಯ ಕಾಂಗ್ರೆಸ್ ನಾಯಕರಿಂದ ಬರುತ್ತೆ ಎಂದರೆ, ಅವರ ಉದ್ದೇಶ ಏನಿರಬಹುದು? ಎಂದು ಸಾರ್ವಜನಿಕರೇ ಊಹಿಸುತ್ತಾರೆ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮತೀಯ ಭಾವನೆಗಳನ್ನು ತುಂಬಬಾರದು ಎಂದು ಗೃಹ ಸಚಿವ ತಿಳಿಹೇಳಿದರು. ಘಟನೆಯ ಪ್ರೇರಣಾ ಶಕ್ತಿಗಳು ಯಾರಿದ್ದಾರೆ? ಎಂಬುದರ ಬಗ್ಗೆಯೂ ತನಿಖೆ ಆಗಲಿದೆ ಎಂದರು.