ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದ್ದು, ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಆಡಳಿತಾರೂಡ ಬಿಜೆಪಿ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲು ಇನ್ನಿಲ್ಲದ ರಣತಂತ್ರ ರೂಪಿಸುತ್ತಿದ್ದು, ಇದೀಗ ಶಿಮ್ಲಾ ನಗರ ಕ್ಷೇತ್ರಕ್ಕೆ ಚಹಾ ಮಾರುವ ವ್ಯಕ್ತಿಗೆ ಟಿಕೆಟ್ ನೀಡಿದೆ!
ಹಿಮಾಚಲ ಪ್ರದೇಶ ರಾಜ್ಯದ 68 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನ.12ರಂದು ಮತದಾನ ನಡೆಯಲಿದೆ. ಡಿ.8ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ದಿನಾಂಕ ಘೋಷಣೆ ಆಗುತ್ತಿದ್ದಂತೆ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿಯು ಚಹಾ ಮಾರುವವನಿಗೆ ಟಿಕೆಟ್ ನೀಡಿ ಗಮನ ಸೆಳೆದಿದೆ.
ಶಿಮ್ಲಾ ನಗರ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಹಾಲಿ ಸಚಿವ ಸುರೇಶ್ ಭಾರದ್ವಾಜ್ ಬದಲಿಗೆ ಚಹಾ ಅಂಗಡಿ ನಡೆಸುತ್ತಿರುವ ಸಂಜಯ್ ಸೂದ್ಗೆ ಟಿಕೆಟ್ ನೀಡಿದೆ. ಸುರೇಶ್ ಭಾರದ್ವಾಜ್ಗೆ ಕಾಸುಂಪ್ತಿ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
'ಶಿಮ್ಲಾ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ನನ್ನನ್ನು ಆಯ್ಕೆ ಮಾಡಿರುವುದು ನಿಜಕ್ಕೂ ಖುಷಿಯ ವಿಚಾರ. ನನಗೆ ಟಿಕೆಟ್ ಕೊಟ್ಟಿರುವುದಕ್ಕೆ ಬಹಳ ಋಣಿಯಾಗಿದ್ದೇನೆ. ಐದು ವರ್ಷ ವಿದ್ಯಾರ್ಥಿ ಪರಿಷತ್ನಲ್ಲಿ ಕೆಲಸ ಮಾಡಿದ್ದ ನನ್ನಂತಹ ಸಣ್ಣ ಕಾರ್ಯಕರ್ತನನ್ನು ಗುರುತಿಸಿರುವುದಕ್ಕೆ ಹೆಮ್ಮೆಯಾಗುತ್ತಿದೆ' ಎಂದು ಸಂಜಯ್ ಸೂದ್ ಹೇಳಿದ್ದಾರೆ.