ನ್ಯೂಸ್

ಬ್ಯಾನ್ ಮಾಡಿದ ತಕ್ಷಣ ಸಂಪೂರ್ಣ ಶಾಂತಿ ನೆಲಸುತ್ತೆ ಎಂದು ಹೇಳಲು ಸಾಧ್ಯವಿಲ್ಲ: ಎಚ್​ಡಿಕೆ

arunakunigal

ರಾಮನಗರ: ಕಾನೂನುಬಾಹಿರ ಚಟುವಟಿಕೆ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಪಾಪುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್​ಐ) ಹಾಗೂ ಅದರ ಅಂಗ ಸಂಸ್ಥೆಗಳು ಸೇರಿದಂತೆ 8 ಸಂಘಟನೆಗಳನ್ನು 5 ವರ್ಷಗಳವರೆಗೆ ನಿಷೇಧಿಸಿ ಕೇಂದ್ರ ಸರ್ಕಾರ ಇಂದು(ಸೆ.28) ಆದೇಶ ಹೊರಡಿಸಿದೆ. ಈ ಕುರಿತು ಚನ್ನಪಟ್ಟಣದಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಮಾಜಘಾತುಕ ಶಕ್ತಿಗಳನ್ನ ನಿಯಂತ್ರಿಸುವುದು ಸರ್ಕಾರದ ಕರ್ತವ್ಯ. ಆದರೆ, ಯಾವ ಯಾವ ಸಂಘಟನೆಗಳಿಂದ ದೇಶದ್ರೋಹದ ಕೆಲಸ ಆಗಿದೆ‌ ಎಂಬುದನ್ನ ಜನರ ಮುಂದೆ ತೆರೆದಿಡಬೇಕು. ಇದು ಸರ್ಕಾರದ ಕರ್ತವ್ಯ ಎಂದರು.

ಬ್ಯಾನ್ ಮಾಡಿದ ತಕ್ಷಣ ಸಂಪೂರ್ಣ ಶಾಂತಿ ನೆಲಸುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸೌಹಾರ್ದತೆ ಬೆಳೆಸುವ ಕೆಲಸವನ್ನು ಸರ್ಕಾರ ಮಾಡಬೇಕು. ಯಾವುದೇ ಸಂಘಟನೆಗಳು ಸಮಾಜಘಾತುಕ ಚಟುವಟಿಕೆಯಲ್ಲಿ ತೊಡಗಿದ್ರೆ ಕಠಿಣ ಕ್ರಮ ಆಗಬೇಕು. ಸಮಾಜಘಾತುಕ ಶಕ್ತಿಗಳನ್ನ ಕಂಟ್ರೋಲ್​ನಲ್ಲಿಡುವುದು ಸರ್ಕಾರದ ಕರ್ತವ್ಯ ಎಂದ ಎಚ್​ಡಿಕೆ, ಎನ್ಐಎ ದಾಳಿಯ ಸತ್ಯಾಂಶಗಳನ್ನು ಜನರ ಮುಂದೆ ಇಡಬೇಕು ಎಂದು ಆಗ್ರಹಿಸಿದರು.

ಯಾವ ಯಾವ ಸಂಘಟನೆಗಳಿಂದ ದೇಶದ್ರೋಹದ ಕೆಲಸ ಆಗಿದೆ‌ ಎಂಬುದನ್ನ ಜನರಿಗೆ ಮಾಹಿತಿ ನೀಡಿ. ಯಾವ ರೀತಿ ಗಲಭೆ ಸೃಷ್ಟಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ ಎಂಬುದೂ ಗೊತ್ತಾಗಬೇಕು ಎಂದು ಎಚ್​ಡಿಕೆ ಹೇಳಿದರು.