ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸುವ ಕ್ರೇಜ್ ಹೆಚ್ಚುತ್ತಿದೆ. ಪ್ರತಿ ಹೆಣ್ಣಿನ ಜೀವನದಲ್ಲಿ ತಾಯ್ತನ ಎಂಬುದು ವಿಶೇಷ ಸಂಭ್ರಮ. ಮಗು ಹುಟ್ಟಿದಾಗಿನಿಂದ ವರ್ಷ ತುಂಬುವವರೆಗೂ ಪ್ರತಿ ತಿಂಗಳೂ ಒಂದೊಂದು ಥೀಮ್ನಲ್ಲಿ ಫೋಟೋಶೂಟ್ ಮಾಡಿಸುತ್ತಾರೆ. ಇನ್ನು ತಾಯಿ ಗರ್ಭದಲ್ಲಿ ಮಗು ಇರುವಾಗಲೇ ಬೇಬಿ ಬಂಪ್ ಫೋಟೋಶೂಟ್ಗೆ ವಿಶೇಷ ಆಸಕ್ತಿ ವಹಿಸ್ತಾರೆ. ಅದೇ ರೀತಿ ಮಲೆನಾಡ ಹೆಣ್ಣು ಮಗಳೊಬ್ಬಳು ಭಾರೀ ತೂಕದ ಐಷಾರಾಮಿ ಬೈಕ್‌ವೊಂದನ್ನು ಓಡಿಸುವ (ರೈಡ್) ಮೂಲಕ ಫೋಟೋಶೂಟ್ ಮಾಡಿಸಿ ತಾಯ್ತನದ ಎಂಜಾಯ್ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಮಾಚೇನಹಳ್ಳಿ ಗ್ರಾಮದ ರಕ್ಷಿತಾ ಎಂಬುವವರು ಏಳೂವರೆ ತಿಂಗಳ ಗರ್ಭಿಣಿ. ಮಿಸ್ ಕರ್ನಾಟಕ ಬ್ಯೂಟಿ ಸ್ಪರ್ಧೆಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ರಕ್ಷಿತಾಗೆ ಬೈಕ್ ಓಡಿಸುತ್ತಾ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿಕೊಳ್ಳುವ ಬಯಕೆ ಇತ್ತು. ತಮ್ಮ ಪತಿಯ ಸಹಕಾರದಿಂದ ಕಪ್ಪು ಬಣ್ಣದ ಹಾರ್ಲೆ ಡೆವಿಡ್ಸನ್ ಬೈಕ್ ಓಡಿಸುತ್ತಾ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ವೈರಲ್ ಆಗಿವೆ.