ಬೆಂಗಳೂರು: ಮಕ್ಕಳಲ್ಲಿನ ಅಪೌಷ್ಟಿಕತೆ ಸಮಸ್ಯೆ ನಿವಾರಣೆಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ರಾಜ್ಯ ಸರ್ಕಾರ ಹಲವು ಮಹತ್ತರ ಯೋಜನೆಗಳನ್ನು ಕೈಗೊಂಡಿದೆ.
ರಾಜ್ಯದಲ್ಲಿ 60 ಲಕ್ಷ ಮಕ್ಕಳ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಇದನ್ನು ತಡೆಗಟ್ಟುವ ಸಲುವಾಗಿ ‘ಸಮಗ್ರ ಶಿಶು ಅಭಿವೃದ್ಧಿ (ಇಂಟಿಗ್ರೇಟೆಡ್ ಚೈಲ್ಡ್ ಡೆವಲಪ್ವೆುಂಟ್)ಯೋಜನೆ’ಯಡಿ ರಾಜ್ಯಾದ್ಯಂತ 137 ಎಂಎಸ್ಪಿಟಿಸಿ (ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕ ಆಹಾರಗಳ ಸರಬರಾಜುದಾರರು) ಮೂಲಕ 60 ಸಾವಿರ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲಾಗುತ್ತಿದೆ. ಈ ಕಾರ್ಯಕ್ರಮ ಸಮರ್ಪಕವಾಗಿ ನಡೆಯುತ್ತಿರುವ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರವಾಗಿ ಎಂಎಸ್ಪಿಟಿಸಿ ಹಾಗೂ ಅಂಗನವಾಡಿ ಕೇಂದ್ರಗಳ ಉಸ್ತುವಾರಿ ಹಾಗೂ ತಪಾಸಣೆ ಕಾರ್ಯಗಳನ್ನು ಕೈಗೊಳ್ಳುತ್ತಿವೆ. ಕಾಲ ಕಾಲಕ್ಕೆ ಸಮೀಕ್ಷೆ ನಡೆಸಿ ವರದಿಯನ್ನೂ ನೀಡಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
- ಕೇಂದ್ರ ಸರ್ಕಾರ 2016 ರಲ್ಲಿ ಈಉಔಣಖಖಉಉ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯ ಮೂಲಕ ಎಂಎಸ್ಪಿಟಿಸಿಗಳಿಗೆ ಸರಬರಾಜಾಗುತ್ತಿರುವ ಆಹಾರ ಪದಾರ್ಥಗಳ ಗುಣಮಟ್ಟ ಕುರಿತು ಸಮೀಕ್ಷೆ ನಡೆಸಿದ್ದು, ವರದಿಯಲ್ಲಿ ಎಂಎಸ್ಪಿಟಿಸಿಗಳಿಗೆ ಸರಬರಾಜಾಗುತ್ತಿರುವ ಆಹಾರ ಪದಾರ್ಥಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಇರುವುದಿಲ್ಲವೆಂದು ಹಾಗೂ ಫಲಾನುಭವಿಗಳು ಮನೆಗೆ ಕೊಂಡೊಯ್ಯಲು ನೀಡಲಾಗುತ್ತಿರುವ ಆಹಾರ ಪದಾರ್ಥಗಳು (ಟಿ.ಎಚ್.ಆರ್.) ಸಹ ಸೂಕ್ಷ್ಮ ಪೋಷಕಾಂಶಗಳೊಂದಿಗೆ (ಮೈಕ್ರೋನ್ಯೂಟ್ರಿಯೆಂಟ್ಸ್) ಬಲವರ್ಧಿತವಾಗಿರುವುದಿಲ್ಲವೆಂದು ತಿಳಿಸಿದೆ.
- ಆಹಾರ ಮತ್ತು ಪೋಷಕಾಂಶ ಮಂಡಳಿಯು, 2019 ರಲ್ಲಿ ವಿವಿಧ ಐಡಿಸಿಎಸ್ ಯೋಜನೆಯಡಿ ಹಲವಾರು ಅಂಗನವಾಡಿಗಳಲ್ಲಿ ಮನೆಗೆ ಕೊಂಡೊಯ್ಯಲು ವಿತರಿಸಲಾಗುತ್ತಿರುವ ಆಹಾರ ಪದಾರ್ಥಗಳ (ಟಿ.ಎಚ್.ಆರ್.) ಒಟ್ಟು 13 ಮಾದರಿಗಳನ್ನು ಸಂಗ್ರಹಿಸಿ, ಅವುಗಳನ್ನು ಚೆನ್ನೈನ ಪ್ರಾದೇಶಿಕ ಆಹಾರ ಪರೀಕ್ಷಾ ಪ್ರಯೋಗಾಲಯದ ಪರಿವೀಕ್ಷಣೆಗಾಗಿ ಕಳುಹಿಸಿತ್ತು. ಪರೀಕ್ಷೆಯಲ್ಲಿ 13 ಟಿ.ಎಚ್.ಆರ್. ಮಾದರಿಗಳ ಪೈಕಿ 12 ಮಾದರಿಗಳಲ್ಲಿ ನಿಗದಿ ಪಡಿಸಿರುವ ಪ್ರಮಾಣಕ್ಕಿಂತಲೂ ಅತೀ ಕಡಿಮೆ ಪ್ರಮಾಣದ ಪ್ರೋಟೀನ್ ಹಾಗೂ ಕ್ಯಾಲರಿಗಳು ಇರುವುದಾಗಿ ಪ್ರಯೋಗಾಲಯದ ವರದಿಯಲ್ಲಿ ಹೇಳಿದೆ.
- ರಾಜ್ಯ ಸರ್ಕಾರವು ಪರಿಷ್ಕೃತ ಪೌಷ್ಟಿಕಾಂಶ ಹಾಗೂ ಆಹಾರ ನಿಯಮಗಳನ್ನು ಅನುಸರಿಸುವ ಸಲುವಾಗಿ, ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಿದ ತಾಂತ್ರಿಕ ಸಮಿತಿಯ 2021ರ ವರದಿಯಲ್ಲಿ, ಎಂಎಸ್ಪಿಟಿಸಿಗಳು ಪರಿಷ್ಕೃತ ಪೌಷ್ಟಿಕಾಂಶ ಹಾಗೂ ಆಹಾರ ನಿಯಮಗಳನ್ನು ಅನುಸರಿಸಲು ಸಾಕಷ್ಟು ಸುಸಜ್ಜಿತ ಸವಲತ್ತುಗಳನ್ನು ಹೊಂದಿಲ್ಲದೆ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೆ, ಐ.ಸಿ.ಡಿ.ಎಸ್. ಯೋಜನೆಯ ಅನುಷ್ಠಾನಕ್ಕಾಗಿ ಎಂಎಸ್ಪಿಟಿಸಿಗಳು, ಬಿ.ಐ.ಎಸ್. ಪರವಾನಿಗೆ ಹೊಂದಿರುವ ಗುಂಪುಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಶಿಫಾರಸು ಮಾಡಿರುವುದು ತಿಳಿದು ಬಂದಿರುತ್ತದೆ.
- ಈ ಎಲ್ಲ ವರದಿಗಳನ್ನು ಪರಿಗಣಿಸಿ, ಐ.ಸಿ.ಡಿ.ಎಸ್. ಯೋಜನೆಯಡಿ ರಾಜ್ಯದಲ್ಲಿರುವ ಸುಮಾರು 60 ಲಕ್ಷ ಫಲಾನುಭವಿಗಳ ಮೇಲೆ ಆಗಿರುವ ಗಂಭೀರ ಪರಿಣಾಮಗಳ ಕುರಿತು ಪರಿಶೀಲಿಸಿದ ರಾಜ್ಯ ಹೈಕೋರ್ಟ್ ಕಳೆದ ಮೇ 27ರಂದು (ಗಕ ಘಣ.3522 ಟ್ಛ 2022 )ಅದೇಶ ನೀಡಿತ್ತು.
ನ್ಯಾಯಾಲಯದ ಆದೇಶದ ಮೇರೆಗೆ ರಾಜ್ಯದಲ್ಲಿ ಪ್ರಸ್ತುತ ನೀಡಲಾಗುತ್ತಿರುವ ಆಹಾರ ಪದಾರ್ಥಗಳ ಪದ್ಧತಿಯನ್ನು ಬದಲಾಯಿಸಿ ಆಹಾರ ಪದಾರ್ಥಗಳ ಬಲವರ್ಧನೆಯ ಸೂತ್ರದ ಅನುಷ್ಠಾನಗೊಳಿಸಲಾಗಿದೆ. ಇದಕ್ಕಾಗಿ ಎಂಎಸ್ಪಿಟಿಸಿಗಳು ಬಿ.ಐ.ಎಸ್. ಪರವಾನಿಗೆ ಹೊಂದಿರುವ ಮಹಿಳಾ ಗುಂಪುಗಳ ಸಹಾಯವನ್ನು ಪಡೆಯಲು 2021ರ ಮೇ 5ರಂದು ಹೊರಡಿಸಿರುವ ಆದೇಶದಂತೆ ಒಪ್ಪಂದ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ನ್ಯಾಯಾಲಯದ ಸೂಚನೆಯಂತೆ ರಾಜ್ಯ ಸರ್ಕಾರ ರಾಜ್ಯಾದ್ಯಂತ ಯೋಜನೆಯನ್ನು ಹಂತ ಹಂತವಾಗಿ ವಿಸ್ತರಿಸುತ್ತಿದ್ದು ಜತೆಗೆ ಕಾಲ ಕಾಲಕ್ಕೆ ಅನುಸರಣಾ ವರದಿಯನ್ನೂ ಸಲ್ಲಿಸುತ್ತಿದೆ.