ಬೆಂಗಳೂರು: ಸರ್ಕಾರಿ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ.1 ಸಮತಲ ಮೀಸಲು ಕಲ್ಪಿಸುವ ಸಲುವಾಗಿ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ-1977ಕ್ಕೆ ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ. ಈ ಮೂಲಕ ತೃತೀಯ ಲಿಂಗಿಗಳಿಗೆ ಮೀಸಲಾತಿ ಕಲ್ಪಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.
ರಾಜ್ಯ ವಿಶೇಷ ಮೀಸಲು ಕಾನ್ಸ್ಟೇಬಲ್ ಪಡೆ ಹಾಗೂ ಬ್ಯಾಂಡ್ಸ್ಮೆನ್ ಹುದ್ದೆಗಳ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ ಕಲ್ಪಿಸದಿರುವುದನ್ನು ಪ್ರಶ್ನಿಸಿ ‘ಸಂಗಮ’ ಸ್ವಯಂಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.
ಸರ್ಕಾರದ ಪರ ವಕೀಲ ವಿಜಯ್ ಕುಮಾರ್ ಎ. ಪಾಟೀಲ್ ಮಾಹಿತಿ ನೀಡಿ, ರಾಜ್ಯದಲ್ಲಿ ಸರ್ಕಾರಿ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ.1 ಸಮತಲ ಮೀಸಲಾತಿ (ಹಾರಿಜಾಂಟಲ್ ರಿಸರ್ವೆಷನ್) ಕಲ್ಪಿಸಲಾಗಿದೆ. ಈ ಸಂಬಂಧ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ-1977ರ ನಿಯಮ 9ಕ್ಕೆ ತಿದ್ದುಪಡಿ ತಂದು 1(ಡಿ) ಸೇರ್ಪಡೆಗೊಳಿಸಲಾಗಿದ್ದು, ಜು. 6ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಸರ್ಕಾರದ ಹೇಳಿಕೆಯನ್ನು ನ್ಯಾಯಪೀಠ ದಾಖಲಿಸಿಕೊಂಡಿತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಅರ್ಜಿ ಸಲ್ಲಿಸಿರುವ ‘ಜೀವ’ ಸ್ವಯಂಸೇವಾ ಸಂಸ್ಥೆಯ ಪರ ಹಿರಿಯ ವಕೀಲೆ ಜೇಯ್ನಾ ಕೊಠಾರಿ ವಾದ ಮಂಡಿಸಿ, ತಿದ್ದುಪಡಿ ನಿಯಮ ಕೇವಲ ಸರ್ಕಾರಿ ಹುದ್ದೆಗಳಿಗೆ ಮಾತ್ರ ಅನ್ವಯಿಸುತ್ತದೆ. ಆದ್ದರಿಂದ, ಸರ್ಕಾರದ ಇತರ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ನೇಮಕಾತಿಗಳಲ್ಲಿ ತಿದ್ದುಪಡಿ ನಿಯಮ ಜಾರಿಗೆ ತರಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.
ಈ ಸಂಬಂಧ ಪ್ರತ್ಯೇಕ ಅರ್ಜಿ ಸಲ್ಲಿಸಿದರೆ, ನ್ಯಾಯಾಲಯ ಸೂಕ್ತ ನಿರ್ದೇಶನ ನೀಡಲಿದೆ ಎಂದು ವಕೀಲೆ ಜೈನಾ ಕೊಠಾರಿ ಅವರಿಗೆ ನ್ಯಾಯಪೀಠ ತಿಳಿಸಿತು. ಇದೇ ವೇಳೆ, ತೃತೀಯ ಲಿಂಗಿಗಳ ಮೀಸಲಾತಿ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಬಗ್ಗೆ 2 ವಾರಗಳಲ್ಲಿ ಮಾಹಿತಿ ನೀಡುವಂತೆ ಕೇಂದ್ರದ ಪರ ವಕೀಲರಿಗೆ ಸೂಚಿಸಿದ ಪೀಠ, ವಿಚಾರಣೆಯನ್ನು ಆ.18ಕ್ಕೆ ಮುಂದೂಡಿತು.
ದೇಶದಲ್ಲೇ ಮೊದಲು: ಹಿರಿಯ ವಕೀಲೆ ಜೈನಾ ಕೊಠಾರಿ, ದೇಶದ ಯಾವ ರಾಜ್ಯಗಳಲ್ಲೂ ತೃತೀಯ ಲಿಂಗಿಗಳಿಗೆ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ಕಲ್ಪಿಸಲಾಗಿಲ್ಲ. ಮೀಸಲಾತಿ ಕಲ್ಪಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ರಾಜ್ಯ ಸರ್ಕಾರದ ಕ್ರಮ ನಿಜಕ್ಕೂ ಶ್ಲಾಘನೀಯ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ನ್ಯಾಯಾಲಯ ಸಹ ಸರ್ಕಾರದ ಕ್ರಮವನ್ನು ಪ್ರಶಂಸಿಸಿತು.
ಅಧಿಸೂಚನೆಯಲ್ಲಿ ಏನಿದೆ?