ನ್ಯೂಸ್

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್​.ಎಸ್​. ದೊರೆಸ್ವಾಮಿ ಇನ್ನಿಲ್ಲ

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್​.ಎಸ್​. ದೊರೆಸ್ವಾಮಿ(104) ಅವರು ಬುಧವಾರ ಮಧ್ಯಾಹ್ನ 1.30ಕ್ಕೆ ನಿಧನರಾದರು.

ಹೃದಯ ಸಮಸ್ಯೆ ಹೊಂದಿದ್ದ ದೊರೆಸ್ವಾಮಿ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಹೃದಯ ಸಮಸ್ಯೆ ಜತೆಗೆ ಅಧಿಕ ರಕ್ತದೊತ್ತಡ, ಬ್ರಾಂಕೈಟಿಸ್ (ಶ್ವಾಸನಾಳದಲ್ಲಿ ಉರಿಯೂತ) ಸೇರಿದಂತೆ ವಯೋಸಹಜ ಸಮಸ್ಯೆಗಳನ್ನು ಹೊಂದಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಕೊನೆಯುಸಿರೆಳೆದರು.

ಕೆಲದಿನಗಳ ಹಿಂದೆ ಹೃದಯ ಸಮಸ್ಯೆಯಿಂದ (ಮೇ 6-12ರವರೆಗೆ) ಜಯದೇವ ಆಸ್ಪತ್ರೆಯಲ್ಲಿ ದೊರೆಸ್ವಾಮಿ ಚಿಕಿತ್ಸೆ ಪಡೆದಿದ್ದರು. ಆ ವೇಳೆ ಅವರಿಗೆ ಜ್ವರ, ನೆಗಡಿ ಹಾಗೂ ಕೆಮ್ಮು ಕಾಣಿಸಿಕೊಂಡಿದ್ದರಿಂದ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯಲ್ಲಿ ಸೊಂಕು ದೃಢಪಟ್ಟಿತ್ತು. ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ನೇತೃತ್ವದಲ್ಲಿ ತಜ್ಞರ ತಂಡ ಚಿಕಿತ್ಸೆ ನೀಡಿತ್ತು. ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದ ಅವರು ಏಳು ದಿನಗಳಲ್ಲೇ ಚೇತರಿಸಿಕೊಂಡು ಮನೆಗೆ ತೆರಳಿದ್ದರು.

ಗುಣಮುಖರಾದ ಒಂದೇ ದಿನದಲ್ಲಿ (ಮೇ 14ರಂದು) ಮತ್ತೆ ಆಸ್ಪತ್ರೆಗೆ ದೊರೆಸ್ವಾಮಿ ದಾಖಲಾದರು. ಆದರೆ, ಬುಧವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮೃತರ ಅಂತ್ಯಕ್ರಿಯೆಯನ್ನು ನಗರದ ಚಾಮರಾಜಪೇಟೆಯ ಟಿಆರ್ ಮಿಲ್ ರುಧ್ರಭೂಮಿಯಲ್ಲಿ ನಡೆಸಲು ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ.

ಎಚ್.ಎಸ್.ದೊರೆಸ್ವಾಮಿ ಅವರ ಪೂರ್ಣ ಹೆಸರು ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ. ಇಳಿವಯಸ್ಸಿನಲ್ಲಿಯೂ ಹೋರಾಟದ ಮೂಲಕ ಹಲವು ಯುವಪೀಳಿಗೆಗಳಿಗೆ ಸ್ಫೂರ್ತಿಯಾಗಿದ್ದರು ದೊರೆಸ್ವಾಮಿ.