ನ್ಯೂಸ್

ಅತ್ಯಾಚಾರ ಆರೋಪಿ ಅನುಮಾನಾಸ್ಪದ ಸಾವು: ಪಿಎಸ್​ಐ ಸೇರಿ ಐವರು ಪೊಲೀಸರ ಅಮಾನತು

ವಿಜಯಪುರ: ಸಿಂದಗಿಯಲ್ಲಿನ ನಡೆದ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಅನುಮಾನಾಸ್ಪದವಾಗಿ ಸಾವಿಗೀಡಾದ ಹಿನ್ನೆಲೆ‌ ಪಿಎಸ್​ಐ ಸೇರಿ ಐವರು ಪೊಲೀಸರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

ಪಿಎಸ್‌ಐ ಸಂಗಮೇಶ ಹೊಸಮನಿ, ಸಿಬ್ಬಂದಿ ಎನ್.ಬಿ.ನಾದ್, ಗುರುರಾಜ್ ಮಾಶ್ಯಾಳ, ಅನಂತ ಪಾಟೀಲ್, ಪಿ.ಎಲ್. ಪಟ್ಟೇದ ಇವರನ್ನು ಅಮಾನತು ಮಾಡಿ ಎಸ್​ಪಿ ಆನಂದಕುಮಾರ್​ ಆದೇಶ ಹೊರಡಿಸಿದ್ದಾರೆ.

ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಡಾಬಾದಲ್ಲಿ ತಂದೆಯೊಂದಿಗೆ ವಾಸವಿದ್ದ 13 ವರ್ಷದ ಬಾಲಕಿ ಮೇಲೆ ಡಾಬಾ ಮಾಲೀಕ ದೇವಿಂದ್ರ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತೆಯ ತಂದೆ ಎರಡು ದಿನದ ಹಿಂದೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದೇವಿಂದ್ರ ಸಂಗೋಗಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಟಾಯ್ಲೆಟ್​ಗೆ ಹೋಗುವುದಾಗಿ ಹೇಳಿ ಪೊಲೀಸ್​ ಠಾಣೆಯ ಶೌಚಗೃಹಕ್ಕೆ ಹೋದವ ಅಲ್ಲೇ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ.

ಕರ್ತವ್ಯಲೋಪದ ಆಧಾರದ ಮೇಲೆ ಪಿಎಸ್​ಐ ಸೇರಿ ಐವರನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ ಎಂದು ಎಸ್​ಪಿ ಆನಂದಕುಮಾರ್​ ತಿಳಿಸಿದ್ದಾರೆ.