ನ್ಯೂಸ್

VIDEO| ಹಾಸ್ಟೆಲ್ ಸಮಯದ ವಿಚಾರವಾಗಿ ಹಿಗ್ಗಾಮುಗ್ಗಾ ಹೊಡೆದಾಡಿಕೊಂಡ ವಿದ್ಯಾರ್ಥಿಗಳು!

ಹಿಮಾಚಲಪ್ರದೇಶ: ಹಮೀರ್ಪುರದಲ್ಲಿರುವ ರಾಷ್ಟ್ರೀಯ ತಾಂತ್ರಿಕ ವಿದ್ಯಾಲಯ (ಎನ್‌ಐಟಿ) ಕ್ಯಾಂಪ‌ಸ್‌ನಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹಾಸ್ಟೆಲ್‌ಗೆ ಪ್ರವೇಶಿಸುವ ಸಮಯದ ಕುರಿತು ಭುಗಿಲೆದ್ದ ವಾದ-ವಿವಾದಗಳು ಹೀಗೆ ಎರಡು ಗುಂಪುಗಳ ನಡುವಿನ ಘರ್ಷಣೆಗೆ ಕಾರಣವಾಗಿದೆ. ಮೊದಲ ಹಾಗೂ ಎರಡನೇ ವರ್ಷದ ವಿದ್ಯಾರ್ಥಿಗಳ ನಡುವಿನ ಗಲಾಟೆ ಇದಾಗಿದೆ. ಇದೊಂದು ಸಣ್ಣ ಘಟನೆಯಾಗಿದ್ದು, ತಕ್ಷಣ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಹಾಸ್ಟೆಲ್ ವಾರ್ಡನ್ ತಿಳಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಹಾಸ್ಟೆಲ್‌ಗೆ ಪ್ರವೇಶಿಸುವ ಸಮಯದ ಕುರಿತಾಗಿ ವಿದ್ಯಾರ್ಥಿಗಳ ನಡುವೆ ಮನಸ್ಥಾಪವಿತ್ತು. ದೊಣ್ಣೆ ಹಾಗೂ ಕಲ್ಲುಗಳನ್ನು ಹಿಡಿದುಕೊಂಡು ಒಬ್ಬರ ವಿರುದ್ಧ ಒಬ್ಬರು ವಿದ್ಯಾರ್ಥಿಗಳು ನಿಂತು ಗಲಾಟೆ ಮಾಡಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಸಂಸ್ಥೆಯ ಆಡಳಿತ ಬ್ಲಾಕ್ ಎದುರಿನ ಸೆಂಟ್ರಲ್ ಬ್ಲಾಕ್ ನಲ್ಲಿ ಘರ್ಷಣೆ ನಡೆದಿದೆ ಎಂದು ವಾರ್ಡನ್ ತಿಳಿಸಿದ್ದಾರೆ. ಈ ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.