ಶಿವಮೊಗ್ಗ: ಕೋಡಿಹಳ್ಳಿ ಚಂದ್ರಶೇಖರ್ ಅವರಂತೆ ನನ್ನ ಮೇಲೆ ಆರೋಪ ಬಂದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎಂದು ರೈತ ಸಂಘದ ನೂತನ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಆಕ್ರೋಶ ಹೊರಹಾಕಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆ ಮಂಗಳವಾರ ಶಿವಮೊಗ್ಗದ ರೈತ ಸಂಘದ ಕಚೇರಿಯಲ್ಲಿ ಮಂಗಳವಾರ ರಾಜ್ಯ ಸಮಿತಿ ಸಭೆ ಏರ್ಪಡಿಸಲಾಗಿತ್ತು.ಸಭೆಗೆ ಆಹ್ವಾನವಿದ್ದರೂ ಕೋಡಿಹಳ್ಳಿ ಚಂದ್ರಶೇಖರ್ ಗೈರಾಗಿದ್ದರು. ಕೋಡಿಹಳ್ಳಿ ವರ್ತನೆಗೆ ಸಭೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ರೈತ ಸಂಘದ ಅಧ್ಯಕ್ಷ ಸ್ಥಾನದಿಂದಲೇ ಕೋಡಿಹಳ್ಳಿಯನ್ನ ವಜಾ ಮಾಡಿ, ಬಸವರಾಜಪ್ಪ ಅವರನ್ನು ರೈತ ಸಂಘದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಇದೇ ವೇಳೆ ಮಾತನಾಡಿದ ಬಸವರಾಜಪ್ಪ, ಕೋಡಿಹಳ್ಳಿ ಹೆಸರಿನಲ್ಲಿ ಸಿಎಂಎನ್ ಎಂಬ ಕಂಪನಿ ನೋಂದಣಿಯಾಗಿದೆ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಅವರು ರೈತ ಸಂಘಕ್ಕೆ ರಾಜೀನಾಮೆ ನೀಡಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಬೇಕಿತ್ತು. ಸಾಲ ಮನ್ನಾ ವಿಷಯದಲ್ಲೂ ರೈತರಿಂದ ಸಂಗ್ರಹ ಮಾಡಿದ ಹಣ ಕೋಟಿ ರೂ. ಲೆಕ್ಕದಲ್ಲಿದೆ. ಇದೆಲ್ಲವೂ ರೈತ ಸಂಘಟನೆಗೆ ಕಪ್ಪುಚುಕ್ಕೆ ಎಂದು ಆಕ್ರೋಶ ಹೊರಹಾಕಿದರು.
ಬ್ಯಾನರ್ನಲ್ಲಿ ಫೋಟೋ ಇರಲ್ಲ: ಸತ್ಯಶೋಧನಾ ಸಮಿತಿಯ ತನಿಖೆಯಲ್ಲಿ ಆರೋಪ ಸಾಬೀತಾದರೆ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನ ಸಂಘದ ಪ್ರಾಥಮಿಕ ಸದಸ್ಯತ್ವದಿಂದಲೇ ವಜಾ ಮಾಡಲಾಗುತ್ತೆ. ಇಷ್ಟು ದಿನ ರೈತ ಸಂಘದ ಎಲ್ಲ ಹೋರಾಟಗಳ ಬ್ಯಾನರ್ಗಳಲ್ಲೂ ಕೋಡಿಹಳ್ಳಿ ಅವರ ಭಾವಚಿತ್ರ ಮಾತ್ರ ಇರುತ್ತಿತ್ತು. ಇನ್ಮುಂದೆ ಸಂಘದ ಬ್ಯಾನರ್ಗಳಲ್ಲಿ, ಕರಪತ್ರಗಳಲ್ಲಿ ರೈತ ಸಂಘದ ಸಂಸ್ಥಾಪಕರಾದ ಎಚ್.ಎಸ್.ರುದ್ರಪ್ಪ, ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಎನ್.ಡಿ.ಸುಂದರೇಶ್ ಅವರ ಫೋಟೋಗಳು ಮಾತ್ರ ಇರಲಿವೆ ಎಂದು ಬಸವರಾಜಪ್ಪ ಘೋಷಿಸಿದರು.
ನನ್ನನ್ನು ಎಲ್ಲರೂ ಸರ್ವಾನುಮತದಿಂದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ನನಗಿಂತ ಸಮರ್ಥರು ಮುಂದೆ ಬಂದರೆ ಅಧ್ಯಕ್ಷ ಸ್ಥಾನ ತ್ಯಜಿಸಲು ನಾನು ಸಿದ್ದನಿದ್ದೇನೆ. ನಾನೆಂದೂ ಪದವಿಗೆ ಅಂಟಿಕೊಂಡು ಕೂರುವುದಿಲ್ಲ. ಬ್ಯಾನರ್ ಹಾಗೂ ಕರಪತ್ರಗಳಲ್ಲಿ ನಮ್ಮ ಫೋಟೋ ಕೂಡ ಪ್ರಕಟವಾಗುವುದಿಲ್ಲ ಎಂದು ತಿಳಿಸಿದರು.