ಕೀರ್ತಿನಾರಾಯಣ ಸಿ. ಬೆಂಗಳೂರು
ಆಧಾರ್, ವೋಟರ್ ಐಡಿ, ಪಾನ್ ಕಾರ್ಡ್, ಮಾರ್ಕ್ಸ್ ಕಾರ್ಡ್ ಹೀಗೆ ಪ್ರತಿಯೊಂದು ವೈಯಕ್ತಿಕ ದಾಖಲೆಯನ್ನೂ ನಕಲಿಯಾಗಿ ಸೃಷ್ಟಿಸಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಇಂಥ ದಾಖಲೆಗಳನ್ನೇ ಕೊಟ್ಟು ‘ಸಿಮ್ ಕಾರ್ಡ್’ ಖರೀದಿಸುವ ದಂಧೆಯೂ ಅವ್ಯಾಹತವಾಗಿದೆ. ಯಾರದ್ದೋ ಹೆಸರಲ್ಲಿ ಇನ್ಯಾರೋ ದಾಖಲೆ ಸಲ್ಲಿಸಿ ಖರೀದಿಸುವ ಸಿಮ್ ಕಾರ್ಡ್ ಗಳನ್ನು ಅಪರಾಧ ಕೃತ್ಯಕ್ಕೆ ಬಳಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಏತನ್ಮಧ್ಯೆ ಜ.1ರಿಂದ ಅನುಷ್ಠಾನಕ್ಕೆ ಬಂದಿರುವ 2023ರ ದೂರಸಂಪರ್ಕ ಕಾಯ್ದೆಯಿಂದ ನಕಲಿ ಸಿಮ್ ಕಾರ್ಡ್ ದಂಧೆಗೆ ಕಡಿವಾಣ ಬೀಳುವ ಆಶಾಭಾವನೆ ವ್ಯಕ್ತವಾಗಿದೆ.
ಸೈಬರ್ ಕ್ರೖೆಂ, ಆರ್ಥಿಕ ಅಪರಾಧ, ಬ್ಯಾಂಕ್ಗಳಿಗೆ ವಂಚನೆ, ಭಯೋತ್ಪಾದನಾ ಚಟುವಟಿಕೆ... ಹೀಗೆ ಪ್ರತಿಯೊಂದಕ್ಕೂ ನಕಲಿ ಸಿಮ್ಳನ್ನೇ ಬಳಸಿರುವುದು ಪೊಲೀಸದದ ತನಿಖೆಯಲ್ಲಿ ದೃಢಪಟ್ಟಿದೆ. ಕೇಂದ್ರ ದೂರ ಸಂಪರ್ಕ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ದೇಶಾದ್ಯಂತ ಪೋರ್ಜರಿ ದಾಖಲೆ ಕೊಟ್ಟು ಖರೀದಿಸಿದ್ದ ಬರೋಬ್ಬರಿ 55.52 ಲಕ್ಷ ಸಿಮ್ ಕಾರ್ಡ್ಗಳ ಸಂಪರ್ಕ ಕಡಿತಗೊಳಿಸಲಾಗಿದೆ.
ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ನಲ್ಲಿ (ಎನ್ಸಿಸಿಆರ್ಪಿ) ತನಿಖಾ ಸಂಸ್ಥೆಗಳು ಮಾಡಿದ ವರದಿ ಆಧರಿಸಿ ಸೈಬರ್ ಕ್ರೖೆಂ ಹಾಗೂ ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ಬಳಕೆಯಾಗಿರುವ 2.78 ಲಕ್ಷ ಸಿಮ್ ಕಾರ್ಡ್ಗಳ ಸಂಪರ್ಕವನ್ನು ರದ್ದುಗೊಳಿಸಲಾಗಿದೆ.
2023ರಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಕರ್ನಾಟಕದಲ್ಲಿ ವಿವಿಧ ಟೆಲಿಕಾಂ ಕಂಪನಿಗಳ 25 ಸಾವಿರಕ್ಕೂ ಅಧಿಕ ಸಿಮ್ ಕಾರ್ಡ್ಗಳನ್ನು ನಕಲಿ ದಾಖಲೆ ಸಲ್ಲಿಸಿ ಖರೀದಿಸಿರುವುದು ದೃಢಪಟ್ಟಿತ್ತು. ಈ ಸಂಬಂಧ ವಿವಿಧ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ಹೀಗಾಗಿ ಸಿಮ್ ಕಾರ್ಡ್ ದಂಧೆಯ ಬಗ್ಗೆ ಸಾರ್ವಜನಿಕರು ಕೂಡ ಎಚ್ಚರಿಕೆ ವಹಿಸಬೇಕು ಎಂದು ಸೈಬರ್ ಪೊಲೀಸರು ಸಲಹೆ ನೀಡಿದ್ದಾರೆ.
ನಿಮ್ಮ ಹೆಸರಿನಲ್ಲಿ ಬೇರೆಯವರು ನಕಲಿ ದಾಖಲೆಗಳನ್ನು ಸಲ್ಲಿಸಿ ಸಿಮ್ ಖರೀದಿಸಿದ್ದಾರೆಯೇ ಎಂಬುದನ್ನು ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ವೆುಂಟ್ ಆಂಡ್ ಕನ್ಸ್ಯೂಮರ್ ಪೊ›ಟೆಕ್ಷನ್ (ಟಿಎಎಫ್ಸಿಒಪಿ) ವೆಬ್ಸೈಟ್ ಮೂಲಕ ಸಿಮ್ ಕಾರ್ಡ್ ಪರಿಶೀಲನೆ ಮಾಡಿಕೊಳ್ಳಬಹುದು. ಎಲ್ಲರೂ ಪರಿಶೀಲಿಸಿಕೊಳ್ಳುವಂತೆ ಪೊಲೀಸರು ಸೂಚಿಸಿದ್ದಾರೆ.
ಅಕ್ರಮ ಹೇಗೆ?
- ಈ ಹಿಂದೆ ಮೊಬೈಲ್ ಶೋರೂಂಗೆ ಹೋಗಿ ಅವರು ಕೊಡುತ್ತಿದ್ದ ಫಾರಂ ಭರ್ತಿ ಮಾಡಿ ಸಹಿ ಹಾಕಿದರೆ ಸಿಮ್ ಕಾರ್ಡ್ ಕೊಡುತ್ತಿದ್ದರು. ಇದೇ ಮಾಹಿತಿ ಇಟ್ಟುಕೊಂಡು ಡೀಲರ್, ಬೇರೆಯವರಿಗೆ ಸಿಮ್ ಮಾರುತ್ತಿದ್ದ. ಗ್ರಾಹಕರಿಗೆ ಉಚಿತವಾಗಿ ಸಿಮ್ ಕೊಟ್ಟರೂ ಮಾರಾಟ ಮಾಡುವ ಡೀಲರ್ಗೆ ಒಂದು ಸಿಮ್ೆ ಕಂಪನಿ 25ರಿಂದ 30 ರೂ. ಕೊಡುತ್ತಿತ್ತು. ಹೀಗಾಗಿಯೇ ಡೀಲರ್ ಅಡ್ಡದಾರಿ ಹಿಡಿಯುತ್ತಿದ್ದ. ದಿನಕ್ಕೆ 100 ಸಿಮ್ ಮಾರುತ್ತಿದ್ದ. 25 ರೂ. ಅಂದುಕೊಂಡರೂ ಆತನಿಗೆ 2,500 ರೂ. ಬರುತ್ತಿತ್ತು. ಇದರಲ್ಲಿ ಕೆಲವು ಸಿಮ್ಳನ್ನು ನಾಶ ಮಾಡುತ್ತಿದ್ದ. ಮತ್ತೆ ಕೆಲವನ್ನು ದಾಖಲೆ ಇಲ್ಲದವರಿಗೆ ಹಣ ಪಡೆದು ಮಾರುತ್ತಿದ್ದ.
- ಈಗ ಸಿಮ್ ಕಾರ್ಡ್ ಬೇಕೆಂದರೆ ಫೋಟೋ ಹಾಗೂ ಆಧಾರ್ ನಂಬರ್ ಕೊಡಬೇಕು. ಶಾಪ್ಗೆ ಹೋದರೆ ಡೀಲರ್ ತಾನೇ ಫೋಟೋ ತೆಗೆದುಕೊಂಡು ಅಪ್ಲೋಡ್ ಮಾಡಿ ಸಿಮ್ ಕೊಡುತ್ತಾನೆ. ಆದರೆ, ನಮ್ಮದೇ ಫೋಟೋ ಹಾಗೂ ಆಧಾರ್ ನಂಬರ್ ಇಟ್ಟುಕೊಂಡು ಬೇರೆಬೇರೆ ಹೆಸರಿನಲ್ಲಿ ಸಿಮ್ ಕಾರ್ಡ್ ಮಾರಾಟ ಮಾಡುತ್ತಿದ್ದಾರೆ. ಇಂತಹ ಅಕ್ರಮ ಪ್ರಕರಣಗಳು ದೇಶದ ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದಿದ್ದು, ಎಫ್ಐಆರ್ಗಳು ದಾಖಲಾಗಿವೆ.
- 1. ದೇಶಾದ್ಯಂತ ನಕಲಿ ದಾಖಲೆ ಸಲ್ಲಿಸಿ ಖರೀದಿಸಿದ್ದ 55.52 ಲಕ್ಷ ಸಿಮ್ ಕಾರ್ಡ್ ರದ್ದು
- 2. ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿ ವರದಿ ಮಾಡಿದ ಸಿಮ್ಳ ಸಂಖ್ಯೆ 13.42 ಲಕ್ಷ
- 3. 70,313 ಡೀಲ್ರ್ (ಪಾಯಿಂಟ್ ಆಫ್ ಸೇಲ್ಸ್) ಕಪ್ಪುಪಟ್ಟಿಗೆ, 365 ಡೀಲರ್ಸ್ ವಿರುದ್ಧ ಎಫ್ಐಆರ್.
- 4. ಸೈಬರ್ ಅಪರಾಧದಲ್ಲಿ ಭಾಗಿಯಾದ ಸಂಬಂಧ 1.32 ಲಕ್ಷ ಸಿಮ್ ಬ್ಲಾಕ್.
- 5. ಕನೆಕ್ಷನ್ ಕಟ್ ಮಾಡಿದ ಸಿಮ್ ಜೋಡಣೆಯಾಗಿರುವ 9.83 ಲಕ್ಷ ಬ್ಯಾಂಕ್ ಖಾತೆ ಫ್ರೀಜ್.
ಹೊಸ ನಿಯಮವೇನು?
- 2024 ಜ.1ರಿಂದ ಹೊಸ ದೂರಸಂಪರ್ಕ ಕಾಯ್ದೆ ಜಾರಿಯಾಗಿದ್ದು, ಸಿಮ್ ಕಾರ್ಡ್ ಖರೀದಿ ನಿಯಮ ಬಿಗಿ ಮಾಡಲಾಗಿದೆ.
- ಸಿಮ್ ಕಾರ್ಡ್ ಡೀಲರ್ಗಳು ಪೊಲೀಸ್ ಪರಿಶೀಲನೆ ಮತ್ತು ಬಯೋಮೆಟ್ರಿಕ್ಸ್ಗೆ ಒಳಗಾಗುವುದು ಕಡ್ಡಾಯವಾಗಿದೆ.
- ನೋಂದಣಿ ಮಾಡಿಸದೆ ಸಿಮ್ ಕಾರ್ಡ್ ಮಾರಾಟ ಮಾಡುವಂತಿಲ್ಲ. ಅಕ್ರಮವಾಗಿ ಮಾರಾಟ ಮಾಡಿದರೆ ಡೀಲರ್ಗಳೇ ಹೊಣೆಗಾರರು.
- ನಿಯಮ ಪಾಲಿಸದ ಡೀಲರ್ಗಳಿಗೆ 10 ಲಕ್ಷ ರೂ. ದಂಡ ವಿಧಿಸಲು ಅವಕಾಶ.
ಸಿಮ್ ಪರಿಶೀಲನೆ ಹೇಗೆ?
- ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ವೆುಂಟ್ ಆಂಡ್ ಕನ್ಸ್ಯೂಮರ್ ಪೊ›ಟೆಕ್ಷನ್ ವೆಬ್ಸೈಟ್ಗೆ ಭೇಟಿ ನೀಡಿ.
- ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಅಲ್ಲಿರುವ ಕ್ಯಾಪ್ಚಾ ನಮೂದಿಸಿ, ಓಕೆ ಕೊಟ್ಟರೆ ಮೊಬೈಲ್ ನಂಬರ್ಗೆ ಒಟಿಪಿ ಬರುತ್ತದೆ.
- ಒಟಿಪಿ ನಮೂದಿಸಿದ ಕೂಡಲೇ ಲಾಗಿನ್ ಆಗುತ್ತದೆ. ನಿಮ್ಮ ಹೆಸರಿನ ದಾಖಲೆಯಲ್ಲಿ ಎಷ್ಟು ಸಿಮ್ ಖರೀದಿಸಲಾಗಿದೆ ಎಂಬುದು ಸಂಖ್ಯೆಸಹಿತ ಕಾಣಿಸುತ್ತದೆ.
- ಸಂಖ್ಯೆ ಎದುರಿಗೆ ನಾಟ್ ಮೈ ನಂಬರ್, ನಾಟ್ ರಿಕ್ವೈರ್ಡ್, ರಿಕ್ವೈರ್ಡ್ ಎಂದು 3 ಆಯ್ಕೆಗಳು ಬರುತ್ತವೆ.
- ನೀವು ಖರೀದಿಸದ ನಂಬರ್ ಬಂದರೆ ನಾಟ್ ಮೈ ನಂಬರ್ ಅಥವಾ ನಾಟ್ ರಿಕ್ವೈರ್ಡ್ ಆಯ್ಕೆ ಮಾಡಿ ರಿಪೋರ್ಟ್ ಮಾಡಬಹುದು.
ಬೆಂಗಳೂರು ಪೊಲೀಸರ ತನಿಖೆ ಸಂದರ್ಭದಲ್ಲಿ ಸೈಬರ್ ಅಪರಾಧ ಸೇರಿ ಬೇರೆಬೇರೆ ಅಪರಾಧ ಪ್ರಕರಣಗಳಲ್ಲಿ ಬಳಕೆಯಾಗಿದ್ದ 20 ಸಾವಿರ ಸಿಮ್ ಕಾರ್ಡ್ಗಳನ್ನು ಶಾಶ್ವತವಾಗಿ ಬ್ಲಾಕ್ ಮಾಡಿಸಲಾಗಿದೆ. ಅನುಮಾನಾಸ್ಪದ ನಂಬರ್ಗಳು ಕಂಡುಬಂದರೆ ಅಂತಹ ಸಿಮ್ ಕಾರ್ಡ್ಗಳ ಸಂಪರ್ಕ ಕಡಿತ ಮಾಡಿಸಲಾಗುತ್ತದೆ.
| ಬಿ. ದಯಾನಂದ ಬೆಂಗಳೂರು ಪೊಲೀಸ್ ಆಯುಕ್ತ