ದೆಹಲಿ: ಹಿರಿಯ ಪತ್ರಕರ್ತರೂ ಆದ ರಾಜ್ಯಸಭೆಯ ಮಾಜಿ ಸದಸ್ಯ ಚಂದನ್ ಮಿತ್ರಾ(65) ಅವರು ಬುಧವಾರ ತಡರಾತ್ರಿ ದೆಹಲಿಯಲ್ಲಿ ನಿಧನರಾದರು. ತಂದೆ ಮೃತಪಟ್ಟ ಬಗ್ಗೆ ಅವರ ಪುತ್ರ ಕುಶನ್ ಮಿತ್ರ ಟ್ವೀಟ್ ಮೂಲಕ ತಿಳಿಸಿದ್ದಾರೆ.
'ದಿ ಪಯೋನಿರ್' ಪತ್ರಿಕೆ ಸಂಪಾದಕರಾಗಿದ್ದ ಚಂದನ್ ಮಿತ್ರಾ, ಕಳೆದ ಜೂನ್ನಲ್ಲಿ ಈ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆಂಗ್ಲಭಾಷೆ ಮೇಲೆ ಹಿಡಿತ ಸಾಧಿಸಿದ್ದ ಚಂದನ್, ರಾಜಕೀಯ ವರದಿಗಾರಿಕೆಯಲ್ಲಿ ಪಳಗಿದ್ದರು. ತಮ್ಮ ವರದಿಗಾರಿಕೆಯಿಂದಲೇ ಹೆಚ್ಚು ಪ್ರಸಿದ್ಧಿ ಪಡೆದಿದ್ದರು. ಎರಡು ಬಾರಿ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು.
ಚಂದನ್ ಮಿತ್ರಾ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
"ಚಂದನ್ ಮಿತ್ರ ಜೀ ಅವರು ತಮ್ಮ ಬುದ್ಧಿಶಕ್ತಿ ಮತ್ತು ಒಳನೋಟಗಳಿಂದ ನೆನಪಿನಲ್ಲಿ ಉಳಿಯುತ್ತಾರೆ. ಅವರು ಮಾಧ್ಯಮ ಹಾಗೂ ರಾಜಕೀಯ ಜಗತ್ತಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡರು. ಅವರ ನಿಧನ ಸುದ್ದಿ ನೋವುಂಟು ಮಾಡಿದೆ. ಓಂ ಶಾಂತಿ" ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.