ನ್ಯೂಸ್

ಒಬ್ಬರಾದ ಮೇಲೊಬ್ಬರಂತೆ ಮ್ಯಾನ್​ಹೋಲ್​​ಗೆ ಬಿದ್ದ ಮೂವರು ದುರ್ಮರಣ! ಸಾವಿನ ಗುಂಡಿಗೆ ಇಳಿಸಿದ್ಯಾರು?

ರಾಮನಗರ: ಒಳಚಂರಂಡಿ ಮ್ಯಾನ್​ಹೋಲ್​ ಸ್ವಚ್ಛಗೊಳಿಸಲು ಹೋದ ಮೂವರು ಪೌರಕಾರ್ಮಿಕರು ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ನಗರದಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಸಂಭವಿಸಿದೆ. ಬೆಂಗಳೂರಿನ ಕಮಲಾನಗರ ನಿವಾಸಿಗಳಾದ ಮಂಜುನಾಥ್, ಮಂಜು, ರಾಜೇಶ್ ಮೃತ ಕಾರ್ಮಿಕರಾಗಿದ್ದು, ಎಲ್ಲರೂ 30ರ ಆಸುಪಾಸಿನ ವಯಸ್ಸಿನವರು.

ಕಳೆದ 15 ದಿನಗಳ ಹಿಂದಷ್ಟೇ ರಾಮನಗರಕ್ಕೆ ಕೆಲಸಕ್ಕೆಂದು ಬಂದಿದ್ದರು. ತಾತ್ಕಾಲಿಕವಾಗಿ ಗುಡಿಸಲು ಹಾಕಿಕೊಂಡು ಜೀವಿಸುತ್ತಿದ್ದರು. ಮೃತರಿಗೆ ಮದುವೆ ಆಗಿದ್ದು, ಕುಟುಂಬಗಳು ಬೆಂಗಳೂರಿನ ಕಮಲಾ ನಗರದಲ್ಲಿಯೇ ನೆಲೆಸಿದ್ದವು. ಇವರನ್ನ ಬಲಿಪಡೆದ ಈ ಮ್ಯಾನ್​ಹೋಲ್ ನಿರ್ವಣಗೊಂಡು ಸುಮಾರು 2 ತಿಂಗಳಷ್ಟೇ ಆಗಿತ್ತು. ಹಾಗಾಗಿ ಯಾವುದೇ ವಿಷಾನಿಲ ಇರುವುದಿಲ್ಲ ಧೈರ್ಯವಾಗಿ ಇಳಿಯಿರಿ ಎಂದು ರೈಟರ್ ಸೂಚಿಸಿದ್ದರಿಂದ ಮೊದಲಿಗೆ ರಾಜೇಶ್ ಇಳಿಯಲು ಮುಂದಾಗಿ ಉಸಿರುಗಟ್ಟಿ ಕೆಳಗೆ ಬಿದ್ದರು, ಇವರನ್ನು ರಕ್ಷಿಸಲು ಹೋದ ಮಂಜುನಾಥ್ ಮತ್ತು ಮಂಜು ಕೂಡ ಮೃತಪಟ್ಟಿದ್ದಾರೆ.

ಶುಕ್ರವಾರ ಒಬ್ಬರಾದ ಮೇಲೊಬ್ಬರಂತೆ ಮೂವರು ಕಾರ್ವಿುಕರು ಸುಮಾರು 20 ಅಡಿ ಆಳದ ಮ್ಯಾನ್​ಹೋಲ್ ಒಳಗೆ ಬೀಳುತ್ತಿದ್ದಂತೆ ಇತರ ಕಾರ್ವಿುಕರು ಆತಂಕಗೊಂಡು ತಮ್ಮವರನ್ನು ರಕ್ಷಿಸಲು ಮುಂದಾಗಿದ್ದರು. ಆದರೆ ಚೇಂಬರ್​ನಿಂದ ವಿಷಾನಿಲ ಇನ್ನೂ ಹೊರಬರುತ್ತಿರುವುದನ್ನು ಅರಿತ ಸ್ಥಳೀಯರು ಉಳಿದವರನ್ನು ಒಳಗೆ ಇಳಿಯದಂತೆ ತಡೆದಿದ್ದಾರೆ. ಕೆಲವರು ಏನಾದರೂ ಮಾಡಿ ತಮ್ಮವರನ್ನು ಉಳಿಸಿಕೊಳ್ಳಬೇಕು ಎಂದು ಹಠ ಹಿಡಿದರೂ ಇದಕ್ಕೆ ಸೊಪ್ಪು ಹಾಕದ ಸ್ಥಳೀಯರು ಇಳಿದರೆ ಸಾಯುತ್ತೀರಿ ಎನ್ನುವ ಎಚ್ಚರಿಕೆ ನೀಡಿ ತಡೆದಿದ್ದಾರೆ. ಅಲ್ಲದೆ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದು, ಚೇಂಬರ್​ನಲ್ಲಿ ಬಿದ್ದ ಮೂವರನ್ನು ಮೇಲೆತ್ತಲಾಯಿತಾದರೂ ಅಷ್ಟರಲ್ಲಾಗಲೇ ಮೂವರ ಪ್ರಾಣಪಕ್ಷಿ ಹಾರಿ ಹೋಗಿತ್ತು.

ನಮ್ಮ ಕಣ್ಣೆದುರಿಗೆ ನಮ್ಮವರನ್ನು ಕಳೆದುಕೊಂಡೆವು. ಅವರ ರಕ್ಷಣೆಗೆ ಮುಂದಾಗಿದ್ದೆ, ಆದರೆ, ಸ್ಥಳೀಯರು ಅವಕಾಶ ನೀಡಲಿಲ್ಲ. ಇದರಿಂದ ನನ್ನ ಪ್ರಾಣ ಉಳಿದಿದೆ. ರೈಟರ್ ಇಳಿಯಲು ಹೇಳಿದ್ದರಿಂದಲೇ ನಮ್ಮವರು ಚೇಂಬರ್​ಗೆ ಇಳಿದದ್ದು ಎಂದು ಮೃತರೊಟ್ಟಿಗೆ ಕೆಲಸ ಮಾಡುತ್ತಿದ್ದ ಕಾರ್ವಿುಕ ರಮೇಶ್​ ಹೇಳಿದ್ದಾರೆ.