ನ್ಯೂಸ್

ಕರೊನಾ ಸೋಂಕಿತ ಗರ್ಭಿಣಿಗೆ ಗರ್ಭಪಾತ ಮಾಡಿದ ವೈದ್ಯರು

ಹುಬ್ಬಳ್ಳಿ: ಕರೊನಾ ಸೋಂಕಿನ ಹಿನ್ನೆಲೆ ಕಿಮ್ಸ್‌ಗೆ ದಾಖಲಾಗಿರುವ ಗರ್ಭಿಣಿಗೆ ವೈದ್ಯಕೀಯ ಹೈ ಪವರ್ ಕಮಿಟಿ ನಿರ್ದೇಶನದಂತೆ ಮೆಡಿಕಲ್ ಟರ್ಮಿನೇಶನ್ ಪ್ರೆಗ್ನನ್ಸಿ (ಎಂಟಿಪಿ) ಮೂಲಕ ಗರ್ಭಪಾತ ಮಾಡಲಾಗಿದೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಢಾಣಕಶಿರೂರು ಗ್ರಾಮದ ಮಹಿಳೆಯನ್ನು ಕೆಲ ದಿನಗಳ ಹಿಂದೆ ಅನಾರೋಗ್ಯದ ಕಾರಣ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿಂದ ಕಿಮ್ಸ್‌ಗೆ ಕಳುಹಿಸಲಾಗಿತ್ತು.

ಕಿಮ್ಸ್‌ನಲ್ಲಿ ಸಾಮಾನ್ಯ ರೋಗಿಗಳ ವಾರ್ಡ್‌ಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡುವಾಗ ಜ್ವರ ಬಂದು, ಕರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿತ್ತು. ಕೂಡಲೇ ಕರೊನಾ ವಿಶೇಷ ವಾರ್ಡ್‌ಗೆ ಸ್ಥಳಾಂತರಿಸಿ, ಆಕೆ ಅದುವರೆಗೆ ಚಿಕಿತ್ಸೆ ಪಡೆದಿದ್ದ ಎರಡು ಸಾಮಾನ್ಯ ವಾರ್ಡ್‌ಗಳನ್ನು ಬಂದ್ ಮಾಡಲಾಯಿತು.

ಐದು ತಿಂಗಳ ಗರ್ಭಿಣಿಗೆ ಕರೊನಾ ಸೋಂಕಿನ ಜತೆಗೆ ಗಂಟಲು ಅಲ್ಸರ್ ಸಮಸ್ಯೆಯೂ ಇದೆ ಎನ್ನಲಾಗಿದೆ. ಹಿಮೊಗ್ಲೋಬಿನ್ ಕಡಿಮೆ ಮತ್ತು ಮೂತ್ರನಾಳದ ತೊಂದರೆಯಿಂದ ಬಳಲುತ್ತಿರುವುದಾಗಿಯೂ ತಿಳಿದುಬಂದಿದೆ.

ಮಹಿಳೆ ಮಾನಸಿಕವಾಗಿ ಕುಗ್ಗಿದ್ದು, ಅದು ಹೊಟ್ಟೆಯೊಳಗಿನ ಶಿಶುವಿನ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುವ ಸಾಧ್ಯತೆಯನ್ನು ವೈದ್ಯರು ಗುರುತಿಸಿದ್ದರು. ಮಹಿಳೆ ಆರೋಗ್ಯದ ಬಗ್ಗೆ ನಿಗಾ ಇಡಲು ಕಿಮ್ಸ್ ನಿರ್ದೇಶಕರು ತಜ್ಞ ವೈದ್ಯರ ತಂಡ ರಚಿಸಿದ್ದರು.

ಈ ತಂಡ ವಿವಿಧ ಪರೀಕ್ಷಾ ವರದಿಗಳನ್ನು ವಿಶ್ಲೇಷಣೆಗೊಳಪಡಿಸಿತ್ತು. ಪ್ರಕರಣ ಸಂಕೀರ್ಣ ಅಸ್ವಾಸ್ಥೃಕ್ಕೆ ಸಂಬಂಧಿಸಿರುವುದರಿಂದ ಯಾವುದೇ ಸಂದರ್ಭದಲ್ಲಿ ಪರಿಸ್ಥಿತಿ ಬಿಗಡಾಯಿಸುವ ಲಕ್ಷಣ ಕಂಡುಬಂದರೆ, ಜಿಲ್ಲಾಧಿಕಾರಿ ಗಮನಕ್ಕೆ ತಂದು ಗರ್ಭಪಾತ ಮಾಡಿಸಲಾಯಿತು. ಸೋಂಕಿತ ಮಹಿಳೆ ಸದ್ಯ ಚೇತರಿಸಿಕೊಳ್ಳುತ್ತಿರುವುದಾಗಿ ಕಿಮ್ಸ್ ಮೂಲಗಳು ತಿಳಿಸಿವೆ.