ರುದ್ರಣ್ಣ ಹರ್ತಿಕೋಟೆ ಬೆಳಗಾವಿ
ಉತ್ತರ ಕರ್ನಾಟಕ ಭಾಗದ ಜನರಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದ ವಿಧಾನಮಂಡಲದ ಚಳಿಗಾಲದ ಅಧಿವೇಶನದಿಂದ ಆದ ಉತ್ಪಾದಕತೆ ಎಷ್ಟು? ಈ ಭಾಗದ ಜನರಲ್ಲಿ ವಿಶ್ವಾಸ ಮೂಡಿಸುವಲ್ಲಿ ಕಂಡ ಸಾಫಲ್ಯತೆ ಏನು? ಉತ್ತರ ಕರ್ನಾಟಕದ ಅಭಿವೃದ್ಧಿಗೆ ನೀಲಿನಕ್ಷೆ ನೀಡಲು ಏಕೆ ಸಾಧ್ಯವಾಗಲಿಲ್ಲ? ಎಂಟು ದಿನಗಳ ಅಧಿವೇಶನ ಮುಕ್ತಾಯವಾದ ಬೆನ್ನಲ್ಲೇ ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರ ಮನಸ್ಸಿನಲ್ಲಿ ಈ ಪ್ರಶ್ನೆಗಳು ಬೃಹದಾಕಾರವಾಗಿ ಬೆಳೆದಿವೆ.
ಅಧಿವೇಶನ ರಾಜಕೀಯ ಮೇಲಾಟಕ್ಕೆ ವೇದಿಕೆಯಾಯಿತೆ ಹೊರತು ಅಭಿವೃದ್ಧಿಯ ಕಡೆ ನೋಟವನ್ನೇನು ಬೀರಲಿಲ್ಲ. ಅಧಿವೇಶನಕ್ಕೆ ಮಾಡಿರುವ 25 ಕೋಟಿ ರೂ.ಗಳ ವೆಚ್ಚ, ಶ್ರಮಕ್ಕೆ ಸಿಕ್ಕಿರುವ ಪ್ರತಿಫಲ ಏನು ಎಂದು ಉತ್ತರ ಕರ್ನಾಟಕದ ಜನ ಮತ್ತೆ ಕೇಳುವಂತಾಗಿದೆ. ಪ್ರತಿ ವರ್ಷ ಹತ್ತು ದಿನ ಅಧಿವೇಶನ ಈ ಬಾರಿ ಎಂಟೇ ದಿನದಲ್ಲಿ ಮುಕ್ತಾಯಗೊಂಡಿದೆ. ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿಧನದ ಗೌರವಾರ್ಥ ಒಂದು ದಿನ ರಜೆ ನೀಡಲಾಗಿತ್ತು. ಇದೀಗ ಡಿ.20ರಂದು ಸಾಹಿತ್ಯ ಸಮ್ಮೇಳನ ಆರಂಭವಾಗುವ ಕಾರಣ ಅಧಿವೇಶನವನ್ನು ಒಂದು ದಿನ ಮೊದಲೇ ಮುಗಿಸಲಾಗಿದೆ. ಕಳೆದ 12 ಅಧಿವೇಶನಗಳಂತೆ ಈಗಲೂ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸಂಪ್ರದಾಯದಂತೆ ಈ ಭಾಗದ 60 ಶಾಸಕರು ಮೂರು ದಿನ ಚರ್ಚೆ ನಡೆಸಿದ್ದಾರೆ. ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಆದರೆ ಸರ್ಕಾರ ಎಷ್ಟರ ಮಟ್ಟಿಗೆ ಸಮಸ್ಯೆಗಳಿಗೆ ಸ್ಪಂದಿಸಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಕಳೆದ ಹನ್ನೆರಡು ಅಧಿವೇಶನಗಳಲ್ಲಿಯೂ ನಡೆದ ಚರ್ಚೆಗೆ, ಸರ್ಕಾರ ಮಾಡಿರುವ ಘೋಷಣೆಗಳಿಂದ ಈ ಭಾಗದ ಅಭಿವೃದ್ಧಿ ಏನಾಗಿದೆ ಎಂಬ ಉತ್ತರ ಸಿಗದ ಪ್ರಶ್ನೆಗಳಂತೆ ಈ ಅಧಿವೇಶನದ ಚರ್ಚೆಗಳು ಅದೇ ಜಾಡಿನಲ್ಲಿವೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ನಿರೀಕ್ಷಿತ ಪ್ರಗತಿ ಆಗಿಲ್ಲವೆಂಬುದನ್ನು ಒಪ್ಪಿಕೊಂಡಿರುವುದು ವಿಶೇಷ.
ಅನುಪಾಲನಾ ವರದಿಯೇ ಇಲ್ಲ: ಕಳೆದ ಹನ್ನೆರಡು ಅಧಿವೇಶನಗಳಲ್ಲಿಯೂ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಯ ಹೆಸರಿನಲ್ಲಿ ಒಂದಷ್ಟು ಘೋಷಣೆಗಳನ್ನು ಮಾಡುವ ಮೂಲಕ ಜನರ ಕಣ್ಣೊರೆಸುವ ಕೆಲಸ ಮಾಡುತ್ತದೆ. ಈಗಲೂ ಅದನ್ನೇ ಮಾಡಿದೆ. ವಿವಿಧ ಕ್ಷೇತ್ರಗಳಲ್ಲಿ ಆಗಿರುವ ಬದಲಾವಣೆಗಳೇನು ಎಂಬ ಬಗ್ಗೆ ಅನುಪಾಲನಾ ವರದಿಯನ್ನೇನು ನೀಡುತ್ತಿಲ್ಲ. ಕಳೆದ ವರ್ಷ ಸಿದ್ದರಾಮಯ್ಯ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒಂದಷ್ಟು ಘೋಷಣೆಗಳನ್ನು ಮಾಡಿದ್ದರು. ಅದರ ಹಿಂದಿನ ವರ್ಷ ಬಸವರಾಜ ಬೊಮ್ಮಾಯಿ ಒಂದು ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಯೋಜನೆಗಳನ್ನು ಘೋಷಣೆ ಮಾಡಿದ್ದರು. ಆ ಯೋಜನೆಗಳು ಏನಾದವು ಎಂಬ ಬಗ್ಗೆ ಅಧಿವೇಶನದಲ್ಲಿ ಉತ್ತರವೇ ಲಭ್ಯವಾಗಲಿಲ್ಲ. ತಮ್ಮ ಸರ್ಕಾರ ಏನು ಮಾಡಿದೆ ಎಂಬುದನ್ನು ಸಿದ್ದರಾಮಯ್ಯ ವಿವರಿಸಿದ್ದು ಈ ಬಾರಿಯ ವಿಶೇಷ.
ಸಿಗದ ನೀಲಿನಕ್ಷೆ: ಈಗಿನ ಅಧಿವೇಶನವೂ ಸೇರಿ ಬೆಳಗಾವಿಯಲ್ಲಿ ನಡೆದಿರುವ 13ನೇ ಅಧಿವೇಶನಗಳಿಂದ ಒಟ್ಟಾರೆ 218 ಕೋಟಿ ರೂ.ಗಳಷ್ಟು ದೊಡ್ಡ ಮೊತ್ತ ವೆಚ್ಚವಾಗಿದೆ. ಇಷ್ಟು ಮೊತ್ತದ ವೆಚ್ಚಕ್ಕೆ ಆದ ಉತ್ಪಾದಕತೆಯಾದರೂ ಏನೇನು ಸಿಗಲಿಲ್ಲ. ಉತ್ತರ ಕರ್ನಾಟಕಕ್ಕೆ ಪ್ರಮುಖವಾಗಿ ನೀರಾವರಿ, ಸಂಪರ್ಕ, ಆರೋಗ್ಯ, ಪ್ರವಾಸೋದ್ಯಮ, ಶಿಕ್ಷಣ, ಉದ್ಯೋಗ ಕ್ಷೇತ್ರಗಳಲ್ಲಿ ಸರ್ಕಾರದ ನೆರವನ್ನು ಜನ ನಿರೀಕ್ಷೆ ಮಾಡುತ್ತಿದ್ದಾರೆ. ಈ ಕ್ಷೇತ್ರಗಳು ಬೆಳೆದರೆ ಉತ್ತರ ಕರ್ನಾಟಕ ಪ್ರಗತಿಯಾಗುತ್ತದೆ ಎಂಬ ಭಾವನೆ ಇಲ್ಲಿದೆ. ಅದಕ್ಕೊಂದು ನೀಲಿನಕ್ಷೆ ಈ ಅಧಿವೇಶನದಿಂದ ಮೂಡಬಹುದೆಂಬ ನಿರೀಕ್ಷೆ ಇತ್ತು. ಆದರೆ ಅಂತಹ ಯಾವುದೇ ಪ್ರಯತ್ನ ಅಧಿವೇಶನದಲ್ಲಿ ಕಾಣಲಿಲ್ಲ.
ಒಂದಿಷ್ಟು ಸಮಾಧಾನ: ರಾಜಕೀಯ ಮೇಲಾಟದ ನಡುವೆಯೂ ಅಧಿವೇಶನ ದಲ್ಲಿ ಒಂದಷ್ಟು ಸಮಾಧಾನದ ಅಂಶಗಳು ಇವೆ. 3 ದಿನ ಉತ್ತರ ಕರ್ನಾಟಕದ ಬಗ್ಗೆ ಶಾಸಕರು ಗಮನ ಸೆಳೆದಿದ್ದಾರೆ. ರಾತ್ರಿ ಬಹು ಹೊತ್ತಿನ ತನಕ ಅಧಿವೇಶನ ನಡೆದಿದೆ. ಗಮನ ಸೆಳೆಯುವ ಗೊತ್ತುವಳಿಗಳಲ್ಲಿ ಶಾಸಕರ ಚರ್ಚೆಗೆ ಅವಕಾಶ ನೀಡಿರುವುದು.
ಪ್ರತಿಪಕ್ಷ ವಿಫಲ, ಸರ್ಕಾರದ ಮೇಲುಗೈ: ಪ್ರತಿಪಕ್ಷ ಬಿಜೆಪಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದ್ದರಿಂದ ಸಹಜವಾಗಿ ಸರ್ಕಾರ ಮೇಲುಗೈ ಸಾಧಿಸಿತು. ಒಳಜಗಳ ಮುಚ್ಚಿಕೊಳ್ಳುವುದಕ್ಕೆ ಪರದಾಡಬೇಕಾದ ಸ್ಥಿತಿ ಆ ಪಕ್ಷದಲ್ಲಿತ್ತು. ಸರ್ಕಾರವನ್ನು ತುದಿಗಾಲಲ್ಲಿ ನಿಲ್ಲಿಸುವುದಾಗಿ ಹೇಳಿಕೊಂಡಿದ್ದ ಬಿಜೆಪಿ ಆ ಪ್ರಯತ್ನವನ್ನೇ ಮಾಡಲಿಲ್ಲ. ಬಿಜೆಪಿಯಲ್ಲಿನ ಸಮನ್ವಯದ ಕೊರತೆಯಿಂದ ಬಹುಮತ ಇದ್ದರೂ ಒಂದು ವಿಧೇಯಕವನ್ನು ಸೋಲಿಸಲು ಆಗಲಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಇದೆ ಎಂದು ಹೇಳಿಕೊಂಡರೂ, ಅಧಿವೇಶನದ ಉದ್ದಕ್ಕೂ ಕಂಡು ಬರಲಿಲ್ಲ.
ಅಧಿವೇಶನ ಮುಖ್ಯ ಏಕೆ: ಅಧಿವೇಶನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗಂಭೀರವಾಗಿ ನಡೆಯಬೇಕು. ಏಕೆಂದರೆ ಕಲಾಪಗಳ ಗುಣಮಟ್ಟ ಕುಸಿದರೆ ಅದರ ಪರಿಣಾಮ ಆಡಳಿತದ ಮೇಲೆ ನೇರವಾಗಿ ಬೀಳುತ್ತದೆ. ಆಡಳಿತ ಕುಸಿದರೆ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂಬುದು ಸಂವಿಧಾನ ತಜ್ಞರ ಅಭಿಪ್ರಾಯ.
ಸಾಧನೆ ಮಾಡಿದ ಖಾದರ್: ಅಧಿವೇಶನ ಹೆಚ್ಚು ಹೊತ್ತು ನಡೆಸುವಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಸಾಧನೆ ಮಾಡಿದ್ದಾರೆ. 3 ದಿನ ಮಧ್ಯರಾತ್ರಿಯ ತನಕ ಕಲಾಪ ನಡೆಸಿದ್ದಾರೆ. ಬುಧವಾರ 14 ಗಂಟೆಗಳಿಗೂ ಹೆಚ್ಚಿನ ಕಾಲ ಅಧಿವೇಶನ ನಡೆಸಿ ಹೊಸ ದಾಖಲೆಯನ್ನೇ ನಿರ್ಮಾಣ ಮಾಡಿದರು.
ಉತ್ತರ ಸಿಗದ ಜನರ ನಿರೀಕ್ಷೆಗಳು