ನ್ಯೂಸ್

ಅಪ್ಪು ಫೋಟೋಗಳಿಗೆ ಡಿಮಾಂಡ್​: 'ಜೊತೆಗಿರದ ಜೀವ ಎಂದಿಗಿಂತ ಜೀವಂತ' ಕ್ಯಾಪ್ಷನ್​ಗೆ ಬೇಡಿಕೆ ಹೆಚ್ಚಾಗಿದೆ...

ಬೆಂಗಳೂರು: ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ನಮ್ಮನ್ನಗಲಿದರೂ ಅವರ ಮೇಲಿನ ಅಭಿಮಾನ ಮಾತ್ರ ಹೆಚ್ಚುತ್ತಲೇ ಇದೆ. ರಾಜ್ಯಾದ್ಯಂತ ಅಪ್ಪು ಫೋಟೋಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಚಿಕ್ಕಮಕ್ಕಳು, ಮಹಿಳೆಯರು, ಯುವಜನರು ಆರ್ಡರ್‌ ಕೊಟ್ಟು ಫೋಟೋ ಮಾಡಿಸ್ತಿಕೊಳ್ತಿದ್ದಾರೆ. ಚಾಮರಾಜನಗರದಲ್ಲಿ 'ಜೊತೆಗಿರದ ಜೀವ ಎಂದಿಗಿಂತ ಜೀವಂತ' ಎಂಬ ಕ್ಯಾಪ್ಷನ್​ ಸಹಿತ ಅಪ್ಪು ಪೋಟೋಗೆ ಬೇಡಿಕೆ ಹೆಚ್ಚಾಗಿದೆ.

ಚಾಮರಾಜನಗರದ ಶ್ರೀ ರಾಘವೇಂದ್ರ ಫೋಟೋ ಮಾರಾಟ ಅಂಗಡಿಯೊಂದರಲ್ಲೇ ಒಂದು ವಾರದಲ್ಲಿ 300ಕ್ಕೂ ಹೆಚ್ಚು ಪುನೀತ್​ ಫೋಟೋಗಳು ಮಾರಾಟ ಆಗಿವೆ. ವಿವಿಧ ಭಂಗಿಯ ಅಪ್ಪು ಫೋಟೋಗಳಿಗೆ ಅಭಿಮಾನಿಗಳಿಂದ ಡಿಮಾಂಡ್ ಬರುತ್ತಿದೆ.

ಬಹುತೇಕರು ಅಪ್ಪುವಿನ ಇಂತಹುದ್ದೇ ಫೋಟೋ ಬೇಕು, ಇಂತಹದ್ದೇ ಕ್ಯಾಪ್ಷನ್ ಇರಬೇಕು ಎಂದು ಆರ್ಡರ್ ಕೊಟ್ಟು ಫೋಟೋ ಮಾಡಿಸಿಕೊಳ್ಳುತ್ತಿದ್ದಾರೆ. ಅಪ್ಪು ಫೋಟೋದಲ್ಲಿ "ಜೊತೆಗಿರದ ಜೀವ ಎಂದಿಗಿಂತ ಜೀವಂತ" ಎಂಬ ಕ್ಯಾಪ್ಷನ್ ಹಾಕುವಂತೆ ಅಭಿಮಾನಿಗಳಿಂದ ಬೇಡಿಕೆ ಹೆಚ್ಚಾಗಿದೆ. ಫೋಟೋ ಫ್ರೇಮ್ ವರ್ಕ್ಸ್ ಅಂಗಡಿಗಳಲ್ಲಿ ಪುನೀತ್ ಭಾವಚಿತ್ರಗಳು ರಾರಾಜಿಸುತ್ತಿವೆ.