ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ನ ಹೊಸ ಉಪತಳಿಗಳಾದ ಬಿಎ3, ಬಿಎ4 ಮತ್ತು ಬಿಎ5 ಪತ್ತೆಯಾಗಿದ್ದು, ಇದರೊಂದಿಗೆ ನಾಲ್ಕನೇ ಅಲೆಗೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿರುವ ಬಿಎ 5 ವೈರಸ್ ರಾಜ್ಯದಲ್ಲೂ ಕಂಡು ಬಂದಿದೆ. ಮೇ ಮತ್ತು ಜೂನ್ನಲ್ಲಿ ನಡೆದ ವಂಶವಾಹಿ ಪರೀಕ್ಷೆಯಲ್ಲಿ ಶೇ.98 ಒಮಿಕ್ರಾನ್ ಬಿಎ1.1.529, ಬಿಎ1, ಬಿಎ2 ಪತ್ತೆಯಾಗಿದ್ದು, ಶೇ.2 ಒಮಿಕ್ರಾನ್ನ ಹೊಸ ಉಪತಳಿಗಳು ಪತ್ತೆಯಾಗಿರುವ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಮೂರನೇ ಅಲೆ ಸಂದರ್ಭದಲ್ಲಿ ಒಮಿಕ್ರಾನ್ ಉಪತಳಿಗಳಾದ ಬಿಎ1.1.529, ಬಿಎ1, ಬಿಎ2 ಮಾತ್ರ ಪತ್ತೆಯಾಗಿದ್ದವು. ಮೂರನೇ ಅಲೆ ತಗ್ಗಿದ ನಂತರ ಏಪ್ರಿಲ್ನಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಸರಾಸರಿ 100 ವರದಿಯಾಗುತ್ತಿದ್ದವು. ಆದರೆ, ಮೇ ಕೊನೆಯ ವಾರಕ್ಕೆ ಪ್ರಕರಣಗಳ ಸಂಖ್ಯೆ 200ಕ್ಕೆ ಏರಿಕೆಯಾಗಿದ್ದವು. ಜೂನ್ ಆರಂಭದೊಂದಿಗೆ ಸೋಂಕು ಪ್ರಕರಣಗಳ ಸಂಖ್ಯೆ ನಿರಂತರ ಏರಿಕೆಯಾಗುತ್ತಿದ್ದು ದಿನದ ಸರಾಸರಿ ಪ್ರಕರಣಗಳ ಸಂಖ್ಯೆ 800 ಗಡಿ ದಾಟಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5 ಸಾವಿರ ಗಡಿ ದಾಟಿದೆ.
ಈ ಹಿನ್ನೆಲೆ ಆರೋಗ್ಯ ಇಲಾಖೆ ವಂಶವಾಹಿ ಪರೀಕ್ಷೆ ತೀವ್ರಗೊಳಿಸಿತ್ತು. ಜತೆಗೆ ಮಕ್ಕಳ ಸಿರೋ ಸಮೀಕ್ಷೆ ಸಹ ನಡೆಸಿದೆ. ಮೇ ಮತ್ತು ಜೂನ್ನಲ್ಲಿ ನಡೆಸಿದ ವಂಶವಾಹಿ ಪರೀಕ್ಷೆಗಳಲ್ಲಿ ಹೊಸ ಉಪತಳಿಗಳು ಒಂದಿಷ್ಟು ಪ್ರಮಾಣದಲ್ಲಿರುವುದು ದೃಢಪಟ್ಟಿದ್ದು, ಇವುಗಳಿಂದಲೇ ಕಳೆದ ಒಂದು ತಿಂಗಳಿಂದ ಹೊಸ ಪ್ರಕರಣ ಹೆಚ್ಚಳವಾಗಿರಬಹುದು ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ವಿಭಾಗದ ವೈದ್ಯಾಧಿಕಾರಿ ತಿಳಿಸಿದ್ದಾರೆ.