ನ್ಯೂಸ್

ಕರೊನಾ ಹಿನ್ನೆಲೆ ನಿರ್ಬಂಧಗಳ ಕುರಿತು ವೈಜ್ಞಾನಿಕ ನೆಲೆಯಲ್ಲಿ ತೀರ್ಮಾನ: ಸಿಎಂ ಬೊಮ್ಮಾಯಿ

arunakunigal

ಬೆಂಗಳೂರು: ಕರೊನಾ ಮೂರನೇ ಅಲೆ ನಡವಳಿಕೆ, ವೈರಾಣು ರೂಪಾಂತರ, ಆರೋಗ್ಯ ಮೂಲ ಸವಲತ್ತುಗಳ ಮೇಲೆ ಬೀಳಬಹುದಾದ ಒತ್ತಡ, ಕಠಿಣ ಕ್ರಮಗಳ ಈವರೆಗಿನ ಸಾಧಕ-ಬಾಧಕ, ತಜ್ಞರ ಸಲಹೆಯನ್ನು ಪರಿಗಣಿಸಿ ನಿರ್ಬಂಧಗಳ ಕುರಿತು ವೈಜ್ಞಾನಿಕ ನೆಲೆಯಲ್ಲಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಆರ್.ಟಿ.ನಗರದ ತಮ್ಮ ನಿವಾಸದ ಬಳಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ವಾರಾಂತ್ಯದ ಕರ್ಫ್ಯೂ ಮುಂದುವರಿಸುವ ಅಥವಾ ಕೈಬಿಡುವ ಬಗ್ಗೆ ಏನನ್ನೂ ಹೇಳಲಿಲ್ಲ. ಮುಂದುವರಿಸಿದರೆ ಇಲ್ಲವೇ ರದ್ದುಪಡಿಸಿದರೆ ಏನಾಗುತ್ತದೆ ಎನ್ನುವುದನ್ನು ತಜ್ಞರ ವರದಿ ಆಧರಿಸಿ ಅವರೊಂದಿಗೆ ಇಂದು ಮಧ್ಯಾಹ್ನದ ಸಭೆಯಲ್ಲಿ ಚರ್ಚಿಸಿದ ಬಳಿಕ ನಿರ್ಧರಿಸಲಾಗುವುದು ಎಂದರು.

ಉದ್ಯಮ-ವಹಿವಾಟು ಕ್ಷೇತ್ರದ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳ ನಾಯಕರು, ಕೇಂದ್ರ ಹಾಗೂ ರಾಜ್ಯದ ಹಲವು ಸಚಿವರು ತಮ್ಮದೇ ಆದ ಅಭಿಪ್ರಾಯಗಳನ್ನು ಸೂಚಿಸಿದ್ದು, ಎಲ್ಲ ಆಯಾಮಗಳನ್ನು ಪರಾಮರ್ಶಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ‌ ಭರವಸೆ ನೀಡಿದರು.

ದಾಸೋಹ ತತ್ವಾಧರಿತ ಆಡಳಿತ: ರಾಜ್ಯ ಸರ್ಕಾರವು ದಾಸೋಹ ತತ್ವಾಧರಿತ ಆಡಳಿತ ನೀಡುತ್ತಿದೆ. ಅನ್ನ ದಾಸೋಹಕ್ಕಾಗಿ ಪಡಿತರ ಚೀಟಿದಾರರಿಗೆ ಅಕ್ಕಿ ನೀಡುವ ಪ್ರಮಾಣ ತಲಾ ನಾಲ್ಕರಿಂದ ಐದು ಕೆಜಿಗೆ ಏರಿಸಿದ್ದು, ಜತೆಗೆ ಒಂದು ಕೆಜಿ ಜೋಳ ಅಥವಾ ರಾಗಿ ವಿತರಿಸಲಾಗುತ್ತಿದೆ. ವಿದ್ಯಾ ದಾಸೋಹದಡಿ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಶಿಷ್ಯವೇತನ ಪಾವತಿಗೆ 1000 ಕೋಟಿ ರೂ., ಕಟ್ಟಡ ಕಾರ್ಮಿಕರ ಮಕ್ಕಳಿಗೆ ಆನ್​ಲೈನ್ ಮೂಲಕ 159 ಕೋಟಿ ರೂ. ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಪಾವತಿಸಲಾಗಿದೆ. ಆಶ್ರಯ ದಾಸೋಹದಡಿ ರಾಜ್ಯ ಸರ್ಕಾರದಿಂದ ಐದು ಲಕ್ಷ ಮನೆಗಳ ಜತೆಗೆ ಕೇಂದ್ರ ಸರ್ಕಾರದ ಆರೂವರೆ ಲಕ್ಷ ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಸಿಎಂ ವಿವರಿಸಿದರು.

ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಆಯೋಜಿಸಿರುವ ದಾಸೋಹ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವೆ. ದಾಸೋಹ ದೊಡ್ಡ ಪರಂಪರೆಯನ್ನು ಲಿಂಗೈಕ್ಯ ಶ್ರೀಗಳು ಹಾಕಿಕೊಟ್ಟಿದ್ದಾರೆ. ವಿದ್ಯಾರ್ಥಿಗಳ ಜತೆಗೆ ಸಮ್ಮಿಳನವಾಗಿ ಗುರುಗಳ ಆಶೀರ್ವಾದ ಪಡೆಯುವೆ ಎಂದು ಬೊಮ್ಮಾಯಿ‌ ತಿಳಿಸಿದರು.