ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ಕೇಳಲೆಂದು ದೆಹಲಿಗೆ ಹೋಗುತ್ತಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿಗೆ ಕಾಲಾವಕಾಶ ಕೇಳಿರುವೆ. ಇಂದು ಸಂಜೆ ಭೇಟಿ ಸಾಧ್ಯತೆಯಿದ್ದು, ಮಾತುಕತೆ ವೇಳೆ ಯಾವ ವಿಷಯ, ಏನು ವಿಚಾರ ಪ್ರಸ್ತಾಪ ಆಗುತ್ತವೋ ಗೊತ್ತಿಲ್ಲವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಆರ್ಟಿ ನಗರದ ತಮ್ಮ ನಿವಾಸದ ಬಳಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೇಂದ್ರದ ಹಲವು ಸಚಿವರನ್ನು ಭೇಟಿಯಾಗಿ ಹಲವು ಯೋಜನೆಗಳ ಬಗ್ಗೆ ಚರ್ಚಿಸುವೆ. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಕಾಲಾವಕಾಶ ಕೋರಿದ್ದು, ನಾಳೆ ಸಿಗುವ ಸಾಧ್ಯತೆ ಇದೆ. ವರಿಷ್ಠರ ಜತೆಗೆ ಮಾತುಕತೆ ನಡೆಸಿ ಗುರುವಾರ ಸಂಜೆ ವಾಪಸ್ ಪ್ರಯಾಣ ಬೆಳೆಸುವೆ ಎಂದರು.
ಕಾನೂನು ತಜ್ಞರ ಜತೆ ಚರ್ಚೆ: ದೆಹಲಿ ಪ್ರವಾಸ ಸಂದರ್ಭದಲ್ಲಿ ಕಾನೂನು ತಜ್ಞರ ತಂಡದ ಸಭೆ ನಡೆಸಿ, ಕೃಷ್ಣಾ-ಕಾವೇರಿ ಮತ್ತಿತರ ಅಂತಾರಾಜ್ಯ ಜಲ ವಿವಾದಗಳಿಗೆ ಸಂಬಂಧಿಸಿದ ಪ್ರಕರಣಗಳ ಪ್ರಗತಿ ಪರಾಮರ್ಶಿಸಲು ತೀರ್ಮಾನಿಸಿರುವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.