ನ್ಯೂಸ್

ನಾಳೆ ವಿಧಾನಸೌಧ ಮೆಟ್ಟಿಲಿನ ಮೇಲೆ 20 ಸಾವಿರ ಜನರಿಂದ ಸಿಎಂಗೆ ಸನ್ಮಾನ

ಬೆಂಗಳೂರು: ನಾಳೆ(ಭಾನುವಾರ) ವಿಧಾನಸೌಧದ ಮೆಟ್ಟಲುಗಳ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ‌ ಅವರಿಗೆ 20 ಸಾವಿರ ಜನರು ಒಮ್ಮೆಲೆ ಸನ್ಮಾನ ಮಾಡಲು ಸಜ್ಜಾಗಿದ್ದಾರೆ.

ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಿಸಲು ರಾಜ್ಯ ಸರ್ಕಾರ ಗ್ರೀನ್​ ಸಿಗ್ನಲ್​ ನೀಡಿರುವ ಹಿನ್ನೆಲೆ ಖುಷಿಗೊಂಡ ಸಮುದಾಯದ ನಾಯಕರು ಸಿಎಂಗೆ ವಿಶೇಷ ಸನ್ಮಾನ ಸಲ್ಲಿಸಲು ಯೋಜನೆ ರೂಪಿಸಿದ್ದಾರೆ. ಸುಮಾರು 20 ಸಾವಿರ ಜನರನ್ನು ಸೇರಿಸಿ ಸಿಎಂ ಅವರನ್ನು ಸನ್ಮಾನಿಸಲಾಗುತ್ತೆ.

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕೆಂಬ ಒತ್ತಾಯ ಬಹಳ ವರ್ಷಗಳಿಂದ ಇದೆ. ಕೇಂದ್ರದಲ್ಲಿ ಈ ವರ್ಗಗಳ ಜನರಿಗೆ ಕೇಂದ್ರ ಸರ್ಕಾರಿ ನೌಕರಿಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಎಸ್​ಸಿಗೆ ಶೇ.15 ಹಾಗೂ ಎಸ್​ಟಿಗೆ ಶೇ.7.5 ಮೀಸಲಾತಿ ಇದೆ. ಎರಡೂ ಸೇರಿ ಶೇ. 22.5 ಮೀಸಲಾತಿ ಇದೆ. ಕರ್ನಾಟಕದಲ್ಲಿ ಎಸ್​ಸಿಗೆ ಶೇ.15 ಹಾಗೂ ಎಸ್​ಟಿಗೆ ಶೇ.3 ಮೀಸಲಾತಿ ಇದ್ದು, ಒಟ್ಟು ಶೇ.18 ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೀಸಲಾತಿ ನಡುವೆ ಶೇ.4.5 ವ್ಯತ್ಯಾಸವಿದೆ. ಇದು ಜನಸಂಖ್ಯೆಗೆ ಅನುಗುಣವಾಗಿಲ್ಲ ಎಂದು ಈ ವರ್ಗಕ್ಕೆ ಸೇರಿದ ಜನ ಮೀಸಲಾತಿ ಹೆಚ್ಚಿಸುವಂತೆ ಹೋರಾಟ ಮಾಡುತ್ತಿದ್ದರು.

2011ರ ಜನಗಣತಿ ಪ್ರಕಾರ ಎಸ್​ಸಿ ಸಮುದಾಯ ಶೇ.17.15, ಎಸ್​ಟಿಗೆ ಸೇರಿದವರು ಶೇ.6.95 ಇದ್ದಾರೆ. ಎರಡೂ ವರ್ಗ ಸೇರಿ ಶೇ.24.10 ಜನರಿದ್ದಾರೆ. ಆದರೆ ಮೀಸಲಾತಿ ಕೇವಲ ಶೇ.18 ಇದೆ. ಹೀಗಾಗಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ ಬಂದಿತ್ತು. ಈ ಕಾರಣಕ್ಕೆ ಸಮ್ಮಿಶ್ರ ಸರ್ಕಾರ ಇದ್ದಾಗ 2019ರಲ್ಲಿ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿಯು 2020ರ ಜುಲೈನಲ್ಲಿ ವರದಿ ನೀಡಿದೆ. ಎಸ್​ಟಿ ಜನಾಂಗದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಶೇ.3ರಿಂದ ಶೇ.7ರಷ್ಟು ಹೆಚ್ಚಿಸಬೇಕು. ಎಸ್​ಸಿ ಜನಾಂಗದವರಿಗೆ ಶೇ.15- ಶೇ.17ರಷ್ಟು ಹೆಚ್ಚಾಗಬೇಕು. ಒಟ್ಟಾರೆ ಮೀಸಲಾತಿಯು ಶೇ.6ರಷ್ಟು ಹೆಚ್ಚಾಗಬೇಕು ಎಂದು ನಾಗಮೋಹನ್ ದಾಸ್ ಸಮಿತಿಯು ತಿಳಿಸಿದೆ. ಆದರೆ ಎರಡು ವರ್ಷ ಕಳೆದರೂ ಅಂಗೀಕಾರ ಆಗಿ ಜಾರಿಯಾಗಿಲ್ಲ. ನಿನ್ನೆ(ಶುಕ್ರವಾರ) ಸರ್ವ ಪಕ್ಷ ನಾಯಕರೊಂದಿಗೆ ಸಭೆ ನಡೆಸಿದ ಸಿಎಂ, ಮೀಸಲಾತಿ ಹೆಚ್ಚಿಸಲು ಗ್ರೀನ್​ ಸಿಗ್ನಲ್​ ನೀಡಿದ್ದಾರೆ.