ರಾಜ್ಯ ಸರ್ಕಾರ ಮತ್ತು ಬಿಜೆಪಿಗೆ ಧನ್ಯವಾದ ಸಲ್ಲಿಸಿದ ಪ್ರವೀಣ್​ ನೆಟ್ಟಾರು ಪತ್ನಿ

Praveen 3
Published on

ಬೆಂಗಳೂರು: ಗುತ್ತಿಗೆ ಆಧಾರದಲ್ಲಿ ಸಿ ಗ್ರೂಪ್​ ಹುದ್ದೆ ನೀಡಿದ್ದಕ್ಕಾಗಿ ಬಿಜೆಪಿ ಯುವ ಮುಖಂಡ ಪ್ರವೀಣ್​ ನೆಟ್ಟಾರು ಪತ್ನಿ ನೂತನ ಕುಮಾರಿ ಅವರು ರಾಜ್ಯ ಸರ್ಕಾರ ಮತ್ತು ಬಿಜೆಪಿ ಪಕ್ಷಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಅರಮನೆ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪಕ್ಷದ ಕಾರ್ಯಕಾರಿಣಿ ಸಭೆಗೆ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ನೂತನಕುಮಾರಿ, ಕೆಲ ಸಮಯ ಚರ್ಚಿಸಿದರು.

2022ರ ಜುಲೈ 26ರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಪ್ರವೀಣ್​ ನೆಟ್ಟಾರ್​ರನ್ನು ದುಷ್ಖರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದರು. ಪ್ರವೀಣ್ ನೆಟ್ಟಾರು ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದರು. ಇವರ ಹತ್ಯೆ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಪ್ರವೀಣ್​ ಕುಟುಂಬದ ಬೆನ್ನಿಗೆ ನಾವಿದ್ದೇವೆ ಎಂದು ಸಿಎಂ ಆ ವೇಳೆ ಅಭಯ ನೀಡಿದ್ದರು. ಅದರಂತೆ ಪ್ರವೀಣ್​ ಪತ್ನಿಗೆ ಸಿಎಂ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಕೊಡುವುದಾಗಿ ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನ ಸಮಾವೇಶದಲ್ಲಿ ಸಿಎಂ ಮಹತ್ವದ ಘೋಷಣೆ ಮಾಡಿದ್ದರು. ಸೆ.29ರಂದು ಪ್ರವೀಣ್​ ಪತ್ನಿಗೆ ಉದ್ಯೋಗ ನೀಡಿ ಬೊಮ್ಮಾಯಿ ಆದೇಶ ಹೊರಡಿಸಿದ್ದರು.

ಗುತ್ತಿಗೆ ಆಧಾರದಲ್ಲಿ ಗ್ರೂಪ್​ ಸಿ ಹುದ್ದೆ ನೀಡಿ ಆತ್ಮಸ್ಥೈರ್ಯ ತುಂಬುವ ಜತೆಗೆ ಕಷ್ಟಕ್ಕೆ ಸ್ಪಂದಿಸಿದ ಸಿಎಂಗೆ ನೂತನಕುಮಾರಿ ಕೃತಜ್ಞತೆ ಸಲ್ಲಿಸಿದರು. ಧೈರ್ಯದಿಂದ ಭವಿಷ್ಯದ ಜೀವನವನ್ನು ನಿರ್ವಹಿಸಬೇಕು ಎಂದು ಬೊಮ್ಮಾಯಿ ಧೈರ್ಯ ತುಂಬಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net