ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಗುಟ್ಟಹಳ್ಳಿ ಆದಿಶಕ್ತಿ ಕೋಳಾಲಮ್ಮದೇವಿ ಧರ್ಮದರ್ಶಿ ಮಾತೃ ಸ್ವರೂಪಿಣಿ ಅಮ್ಮ ಮತ್ತು ಅರ್ಚಕ ಲಕ್ಷ್ಮೀಪತಿ ಇಬ್ಬರೂ ಒಂದೇ ದಿನ ನಿಗೂಢವಾಗಿ ಮೃತಪಟ್ಟಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.
12ನೇ ವಯಸ್ಸಿಗೆ ದೇವರ ಆರಾಧಕರಾಗಿದ್ದ ಶ್ರೀಧರ್@ಅಮ್ಮ, ದೇವರ ಕಾರ್ಯಗಳಿಂದ ಅಸಂಖ್ಯಾತ ಭಕ್ತವೃಂದ ಹಾಗೂ ಶಿಷ್ಯ ವೃಂದವನ್ನ ಗಳಸಿದ್ದರು. ಮಂಗಳಮುಖಿಯಾಗಿ ಪರಿವರ್ತನೆಯಾಗಿದ್ದ ಶ್ರೀಧರ್ ಮುಂದೆ ಶ್ರೀಧರಮ್ಮ ಎಂದೇ ಪರಿಚಿತವಾದರು.ಈ ಭಾಗದಲ್ಲಿ ಭಕ್ತರ ಇಷ್ಟಾರ್ಥಗಳನ್ನ ಈಡೇರಿಸೋ ದೇವಿ, ಅಸಂಖ್ಯಾತ ಭಕ್ತರ ಪಾಲಿಗೆ ನೆಚ್ಚಿನ ಅಮ್ಮಾ ಕೂಡ ಆಗಿದ್ದರು. ನಿತ್ಯ ಭಕ್ತ ಸಮೂಹವನ್ನ ಸೆಳೆಯುತ್ತಿದ್ದ ಶ್ರೀಧರಮ್ಮ, ಗುಟ್ಟಹಳ್ಳಿ ಬಳಿ ಶ್ರೀ ಆದಿಶಕ್ತಿ ಕೋಳಾಲಮ್ಮದೇವಿ, ಶ್ರೀ ಮುನೇಶ್ವರಸ್ವಾಮಿ ದೇವಾಲಯ ಹೆಸರಲ್ಲಿ ಟ್ರಸ್ಟ್ ಮಾಡಿಕೊಂಡು ಭಕ್ತರ ಸೇವಾಕಾರ್ಯ ಮಾಡುತ್ತಿದ್ದರು. ಇವರ ಜತೆ ಶಿಷ್ಯ ಲಕ್ಷ್ಮೀಪತಿ ಕೂಡ ಇದ್ದರು.
ಗುರುವಾರ ರಾತ್ರಿ ಅದೇನಾಯಿತೋ ಏನೋ... ಇದ್ದಕ್ಕಿದ್ದಂತೆ ಶ್ರೀಧರಮ್ಮ ಮತ್ತು ಲಕ್ಷ್ಮೀಪತಿ ಇಬ್ಬರೂ ಶುಕ್ರವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಶ್ರೀಧರಮ್ಮ ಕಾವಿ ಸಮವಸ್ತ್ರ ಧರಿಸಿಕೊಂಡೇ ಮೃತಪಟ್ಟಿದ್ದಾರೆ. ಇವರಿಬ್ಬರ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು, ಹಣ, ಆಸ್ತಿ, ಆಭರಣದ ವಿಚಾರಕ್ಕೆ ಜಗಳವಾಗಿ ಆತ್ಮಹತ್ಯೆ ಮಾಡಿಕೊಂಡರೇ ಅಥವಾ ಬೇರೆ ಯಾರಾದರೂ ಕೊಲೆ ಮಾಡಿದ್ದಾರೆಯೇ? ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಚಿಂತಾಮಣಿ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ಪೂಜಾ ಕೈಂಕರ್ಯಗಳ ಮೂಲಕ ಜನರ ಕಷ್ಟ-ಸುಖಗಳಿಗೆ ಆಸರೆಯಾಗುತ್ತಿದ್ದ ಶ್ರೀಧರಮ್ಮನ ಸಂಪತ್ತು ಹಾಗೂ ಕೆಲವೊಂದು ಕಾರ್ಯಗಳೇ ಸಾವಿಗೆ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಪೊಲೀಸರ ತನಿಖೆಯಿಂದಲೇ ಈ ಎಲ್ಲ ಅನುಮಾನಕ್ಕೂ ಉತ್ತರ ಸಿಗಬೇಕಿದೆ. (ದಿಗ್ವಿಜಯ ನ್ಯೂಸ್, ಚಿಕ್ಕಬಳ್ಳಾಪುರ)