ಚಿಕ್ಕಬಳ್ಳಾಪುರ: ಮೂವರು ಬಾಲಕರು ಚಿಂತಾಮಣಿ ತಾಲೂಕಿನ ಕೊಡದವಾಡಿ ಕೆರೆಯಲ್ಲಿ ಮುಳುಗಿ ದುರಂತ ಅಂತ್ಯ ಕಂಡಿದ್ದಾರೆ.
ಚಿಂತಾಮಣಿ ತಾಲೂಕಿನ ಬಚ್ಚವಾರಹಳ್ಳಿ ಗ್ರಾಮದ ಸತೀಶ್ (17), ಕೊಡದವಾಡಿಯ ಸೋದನ್(16) ಮತ್ತು ಸುದರ್ಶನ್ (17) ಮೃತ ದುರ್ದೈವಿಗಳು.
ಇತ್ತೀಚಿಗೆ ಸುರಿದ ಮಳೆಯಿಂದಾಗಿ ಕೊಡದವಾಡಿ ಕೆರೆ ತುಂಬಿದ್ದು, ಮಂಗಳವಾರ ಬೆಳಗ್ಗೆ ಕೆರೆಯಲ್ಲಿ ಕುರಿಗಳ ಮೈ ತೊಳೆಯಲು ಬಾಲಕರು ಹೋಗಿದ್ದಾರೆ. ನಿಯಂತ್ರಣ ತಪ್ಪಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಶೋಧಕಾರ್ಯ ನಡೆಸಿದ್ದು, ಇಬ್ಬರ ಶವಗಳನ್ನ ಹೊರತೆಗೆದಿದ್ದಾರೆ. ಮಧ್ಯಾಹ್ನ 2 ಗಂಟೆಯಾದರೂ ಮತ್ತೊಬ್ಬ ಮೃತದೇಹ ಪತ್ತೆಯಾಗಿರಲಿಲ್ಲ. ಶೋಧಕಾರ್ಯ ಮುಂದುವರಿದಿದೆ.
ಸ್ಥಳದಲ್ಲಿ ಗ್ರಾಮಸ್ಥರು ಬೀಡುಬಿಟ್ಟಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.