ಚೆನ್ನೈ: ಮಕ್ಕಳಲ್ಲಿ ಯಾವುದೇ ಸಮಸ್ಯೆಯಿದ್ದರೂ, ಅದು ತಾಯಿಗೆ ದೊಡ್ಡ ಸಮಸ್ಯೆಯೆನಿಸುವುದೇ ಇಲ್ಲವಂತೆ. ಆದರೆ ಇಲ್ಲೊಬ್ಬ ತಾಯಿ ಮಾತ್ರ ನರ ಸಮಸ್ಯೆಯಿಂದ ಬಳಲುತ್ತಿದ್ದ ಮಗನನ್ನು ನೋಡಿಕೊಳ್ಳಲಾಗುತ್ತಿಲ್ಲ ಎಂದು ಕೊಲೆ ಮಾಡಿರುವಂತಹ ಘಟನೆ ನಡೆದಿದೆ.
ಇದನ್ನೂ ಓದಿ: ವಧು ಎಂದು ನಂಬಿಸಿ ಕೆಲಸದವಳನ್ನೇ ಮದುವೆ ಮಾಡಿಸಿದಳು! ಹೆಂಡತಿಗೆ ಗಿಫ್ಟ್ ಕೊಟ್ಟಿದ್ದ ಮೊಬೈಲ್ನಿಂದಲೇ ಬಯಲಾಯಿತು ಸತ್ಯ!
ಹೌದು! ಇಂತದ್ದೊಂದು ಘಟನೆ ಚೆನ್ನೈನಲ್ಲಿ ನಡೆದಿದೆ. ಈಗ 11 ತಿಂಗಳ ಹಿಂದೆ, ಅಂದರೆ ಜನವರಿಯಲ್ಲಿ 33 ವರ್ಷದ ನಾಡಿಯಾ ಹೆಸರಿನ ಮಹಿಳೆ ತನ್ನ ಮೂರು ವರ್ಷದ ಮಗ ಇಶಾಂತ್ನನ್ನು ಸ್ಟಾನ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆತಂದಿದ್ದಳು. ಮಗ ಆಟವಾಡುತ್ತಿದ್ದಾಗ ಮುಗ್ಗರಿಸಿ ಬಿದ್ದು, ತಲೆಗೆ ಪೆಟ್ಟು ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಳು. ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಮೂರೇ ದಿನಗಳಲ್ಲಿ ಮಗು ಪ್ರಾಣ ಬಿಟ್ಟಿತ್ತು. ಈ ವಿಚಾರದಲ್ಲಿ ಯಾವುದೇ ಅನುಮಾನವನ್ನು ಆಸ್ಪತ್ರೆಯ ವೈದ್ಯರು ವ್ಯಕ್ತಪಡಿಸಿರಲಿಲ್ಲ.
ಮಗು ಸತ್ತ ಕೆಲ ದಿನಗಳಲ್ಲಿ, ಮಗುವಿನ ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ. ಮಗು ಮುಗ್ಗರಿಸಿ ಬಿದ್ದು ಸಾವನ್ನಪ್ಪಿಲ್ಲ ಎನ್ನುವುದು ವರದಿಯಲ್ಲಿ ದಾಖಲಾಗಿದೆ. ಮಗುವಿನಲ್ಲಿ ನರ ಸಮಸ್ಯೆಯಿದ್ದಿದ್ದರಿಂದಾಗಿ ಅದು ಇನ್ನೂ ನಡೆಯಲು ಕೂಡ ಕಲಿತಿರಲಿಲ್ಲ ಎನ್ನುವುದು ತಿಳಿದುಬಂದಿದೆ. ಇದಾದ ನಂತರ ವಿಚಾರಣೆ ನಡೆಸಿದ ಪೊಲೀಸರಿಗೆ ಇದು ಆಕಸ್ಮಿಕವಲ್ಲ, ಕೊಲೆ ಎನ್ನುವುದು ತಿಳಿದುಬಂದಿದೆ.
ಮಗನಿಗೆ ಮೂರು ವರ್ಷವಾದರೂ ಆತ ಇನ್ನೂ ಚಿಕ್ಕ ಮಗುವಿನಂತೇ ಇರುತ್ತಿದ್ದ. ಪ್ರತಿದಿನ ಆತನನ್ನು ನೋಡಿಕೊಳ್ಳುವುದು ಅತ್ಯಂತ ಕಷ್ಟದ ಕೆಲಸವಾಗುತ್ತಿತ್ತು. ಅದಕ್ಕಾಗಿ ನಾನೇ ಕೊಲೆ ಮಾಡಿದೆ ಎಂದು ಮಗುವಿನ ತಾಯಿ ತಪ್ಪೊಪ್ಪಿಕೊಂಡಿದ್ದಾರೆ. ಇದೀಗ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. (ಏಜೆನ್ಸೀಸ್)