ಚಂಡೀಗಢ: ಪಂಜಾಬ್ನ ಮೊಹಾಲಿಯಲ್ಲಿರುವ ಚಂಡೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್ನ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಿಸಿ ಆನ್ಲೈನ್ ಮಾಡಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿನಿಯರು ಸೇರಿದಂತೆ ಸಾವಿರಾರು ಮಂದಿ ವಿವಿ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದು, ಸದ್ಯ ಪ್ರತಿಭಟನೆ ತಣ್ಣಗಾಗಿದೆಯಾದರೂ ಮುಂಜಾಗ್ರತಾ ಕ್ರಮವಾಗಿ ಸೆ.24ರವರೆಗೂ ವಿವಿಗೆ ರಜೆ ಘೋಷಿಸಲಾಗಿದೆ.
ಹಾಸ್ಟೆಲ್ನಲ್ಲಿ ಸುಮಾರು 60 ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿರುವುದನ್ನು ಸಹಪಾಠಿ ವಿದ್ಯಾರ್ಥಿನಿಯೊಬ್ಬಳು ವಿಡಿಯೋ ಮಾಡಿ ಅದನ್ನು ಶಿಮ್ಲಾದಲ್ಲಿರುವ ತನ್ನ ಸ್ನೇಹಿತನಿಗೆ ಕಳುಹಿಸಿದ್ದಾಳೆ. ಅದನ್ನು ಆತ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾನೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿನಿಯರು ದೂರಿದ್ದಾರೆ. ಈ ಪ್ರಕರಣ ಸಂಬಂಧ ಆರೋಪಿತ ವಿದ್ಯಾರ್ಥಿನಿಯೊಬ್ಬಳನ್ನು ಬಂಧಿಸಲಾಗಿದ್ದು, ಶಿಮ್ಲಾದಲ್ಲಿ ಈಕೆಯ ಗೆಳೆಯ ಸನ್ನಿ ಮೆಹ್ತಾ ಮತ್ತು ಮತ್ತೊಬ್ಬ ಪರಿಚಿತ ಯುವಕ ರಂಕಜ್ ವರ್ಮಾನನ್ನು ಬಂಧಿಸಲಾಗಿದೆ. ಇನ್ನು ನಿರ್ಲಕ್ಷ್ಯತೆ ಆರೋಪದಡಿ ಇಬ್ಬರು ವಾರ್ಡನ್ಗಳನ್ನೂ ಕೆಲಸದಿಂದ ಅಮಾನತು ಮಾಡಲಾಗಿದೆ.
60 ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಲೀಕ್ ಆಗಿದೆ ಎಂಬುದು ವದಂತಿ ಎಂದಿರುವ ಎಡಿಜಿಪಿ ಗುರುಪ್ರೀತ್ ಕೌರ್ ದೇವ್, ಬಂಧಿತ ವಿದ್ಯಾರ್ಥಿನಿಯು ತನ್ನ ಸ್ನೇಹಿತನಿಗೆ ಕಳುಹಿಸಿದ್ದ ಖಾಸಗಿ ವಿಡಿಯೋ ಮಾತ್ರ ಸೋರಿಕೆಯಾಗಿದೆ. 60 ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ವಿಡಿಯೋ ಪ್ರಾಥಮಿಕ ತನಿಖೆಯಲ್ಲಿ ದೊರಕಿಲ್ಲ ಎಂದಿದ್ದಾರೆ.
ಇನ್ನು ಖಾಸಗಿ ವಿಡಿಯೋ ಲೀಕ್ ಆಗಿದೆ ಎಂಬ ಸುದ್ದಿ ಕೇಳಿ ಹಾಸ್ಟೆಲ್ನಲ್ಲಿ 7 ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ ಅದನ್ನು ವಿವಿ ಕುಲಪತಿ ಹಾಗೂ ಮೊಹಾಲಿ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೋನಿ ನಿರಾಕರಿಸಿದ್ದಾರೆ. ಆತಂಕದಿಂದ ಬಳಲುತ್ತಿದ್ದ ಒಬ್ಬ ವಿದ್ಯಾರ್ಥಿನಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಂಜಾಬ್ ಸರ್ಕಾರ, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ನಿಷ್ಪಕ್ಷಪಾತ ಮತ್ತು ಪ್ರಾಮಾಣಿಕವಾಗಿ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿನಿಯರಿಗೆ ಭರವಸೆ ನೀಡಿದ್ದಾರೆ.
'ನಾವು ಯಾವಾಗಲೂ ನಮ್ಮ ವಿದ್ಯಾರ್ಥಿಗಳೊಂದಿಗೆ ಇರುತ್ತೇವೆ, ಶೈಕ್ಷಣಿಕ ಹಾಗೂ ಸುರಕ್ಷತೆ ಮತ್ತು ಯೋಗಕ್ಷೇಮದತ್ತ ನಮ್ಮ ಬದ್ಧತೆ ಇದೆ' ಎಂದು ವಿಶ್ವವಿದ್ಯಾಲಯ ತಿಳಿಸಿದೆ.